ಬಳ್ಳಾರಿ : ಬಳ್ಳಾರಿ ನಗರಾಭಿವೃದ್ಧಿ ಪ್ರಾಧಿಕಾರದ ಸಾಮಾನ್ಯ ಸಭೆಯು ಅಧ್ಯಕ್ಷ ದಮ್ಮೂರು ಶೇಖರ್ ನೇತೃತ್ವದಲ್ಲಿ ಬುಡಾ ಕಚೇರಿಯ ಸಭಾಂಗಣದಲ್ಲಿಂದು ನಡೆದಿದ್ದು ಹಲವು ವಿಷಯಗಳ ಕುರಿತು ಚರ್ಚಿಸಲಾಯಿತು.
ಜೂನ್ 20ರಂದು ಜರುಗಿದ ಬಳ್ಳಾರಿ ನಗರಾಭಿವೃದ್ಧಿ ಪ್ರಾಧಿಕಾರದ ಸಾಮಾನ್ಯ ಸಭೆಯ ನಡಾವಳಿಗಳನ್ನು ಈ ಸಂದರ್ಭದಲ್ಲಿ ದೃಢೀಕರಿಸಿ ಸಭೆಯಲ್ಲಿ ಮಂಡಿಸಲಾಯಿತು. ಬುಡಾದ ಜೂನ್ ಮಾಹೆಯ ಜಮಾ ಮತ್ತು ಖರ್ಚುಗಳ ವಿವರ ಪಟ್ಟಿ ಚರ್ಚಿಸಲಾಯಿತು ಮತ್ತು ಅನುಮೋದಿಸಲಾಯಿತು. ಬುಡಾದ ಪ್ಯಾನೆಲ್‌ನಲ್ಲಿ ವಕೀಲರನ್ನು ಸೇರಿಸಿಕೊಳ್ಳುವ ಹಾಗೂ ಕೆಲವು ವಕೀಲರ ಹೆಸರನ್ನು ಪ್ಯಾನೆಲ್‌ನಿಂದ ರದ್ದುಗೊಳಿಸುವುದಕ್ಕೆ ಸಂಬಂಧಿಸಿದಂತೆ ಚರ್ಚೆ ನಡೆಯಿತು.
ನಗರಾಭಿವೃದ್ಧಿ ಪ್ರಾಧಿಕಾರದಲ್ಲಿ ಲಭ್ಯವಿರುವ ನಾಗರಿಕ ಸೌಲಭ್ಯ ನಿವೇಶನವನ್ನು ಹಂಚಿಕೆ ಮಾಡಲು ಸಿಎ ನಿವೇಶನ ಹಂಚಿಕೆ ಸಮಿತಿ ರಚಿಸಲು ಚರ್ಚಿಸಲಾಯಿತು. ಜೊತೆಗೆ ಪ್ರಾಧಿಕಾರದ ಆವರಣದಲ್ಲಿರುವ ಇಂದಿರಾ ಕ್ಯಾಂಟೀನ್‌ನ ಇದೇ ಆವರಣದ ಇನ್ನೊಂದು ಸ್ಥಳಕ್ಕೆ ಸ್ಥಳಾಂತರಿಸಲು ತೀರ್ಮಾನಿಸಲಾಯಿತು.
ಬುಡಾದ 2020-21ನೇ ಸಾಲಿನ ಆಯವ್ಯಯದಲ್ಲಿ ಅಭಿವೃದ್ಧಿ ಕಾಮಗಾರಿಗಳನ್ನು ಕೈಗೊಳ್ಳುವ ಸಂಬಂಧ ಕ್ರಿಯಾ ಯೋಜನೆಗೆ ಅನುಮೋದನೆ ಹಾಗೂ ಬಳ್ಳಾರಿ ತಾಲೂಕಿನ ಬಿ.ಗೋನಾಳ್ ಗ್ರಾಮದ ಒಟ್ಟು 27 ರೈತರಿಂದ 101.98 ಎಕರೆ ಜಮೀನಿನಲ್ಲಿ 50:50ರ ಅನುಪಾತದಲ್ಲಿ ಪ್ರಾಧಿಕಾರ ಮತ್ತು ಖಾಸಗಿ ಸಹ ಭಾಗಿತ್ವದಲ್ಲಿ ವಸತಿ ಬಡಾವಣೆಯನ್ನು ನಿರ್ಮಿಸಲು ಸರ್ಕಾರದಿಂದ ಆಡಳಿತಾತ್ಮಕ ಅನುಮೋದನೆ ಆಗಿರುವ ಬಗ್ಗೆಯೂ ಚರ್ಚೆ ನಡೆಯಿತು.
ಇನ್ನೂ ನಗರದ ಉತ್ತರ ಭಾಗದ ರಾಷ್ಟ್ರೀಯ ಹೆದ್ದಾರಿ-63ರಿಂದ ಪ್ರಸ್ತಾಪಿತ ವಿಮಾನ ನಿಲ್ದಾಣಕ್ಕೆ ಸಂಪರ್ಕ ರಸ್ತೆಯನ್ನು ಕೈಗೊಳ್ಳುವುದಕ್ಕೆ ಸಂಬಂಧಿಸಿದಂತೆ ಅಧ್ಯಕ್ಷ ದಮ್ಮೂರು ಅವರು ಸಭೆಯಲ್ಲಿ ಪ್ರಸ್ತಾಪಿಸಿದರು. ಪ್ರಾಧಿಕಾರದ ವ್ಯಾಪ್ತಿಯಲ್ಲಿ ಅನಧಿಕೃತ ಬೆಳವಣಿಗೆಗಳು ನಡೆಯುತ್ತಿದ್ದು, ಅವುಗಳನ್ನು ತಡೆಗಟ್ಟುವ ನಿಟ್ಟಿನಲ್ಲಿ ಕೈಗೊಳ್ಳಬೇಕಾದ ಕ್ರಮಗಳ ಕುರಿತು ಚರ್ಚೆ ನಡೆದವು.
ಖಾಸಗಿ ವಸತಿ ವಿನ್ಯಾಸದ ಅಂತಿಮ ಹಂತದ ನಿವೇಶನವನ್ನು ಬಿಡುಗಡೆ ಮಾಡುವುದು, ಕೈಗಾರಿಕೆ ಬಹುನಿವೇಶನ ವಿನ್ಯಾಸ ನಕ್ಷೆ ಅನುಮೋದನೆ, ಖಾಸಗಿ ವಸತಿ ವಿನ್ಯಾಸ ನಕ್ಷೆ ಅನುಮೋದನೆ ನೀಡಲು, ಜಮೀನುಗಳ ಮಾರ್ಪಡಿತ ವಸತಿ ವಿನ್ಯಾಸ ನಕ್ಷೆ ಮಂಜೂರಾತಿ ಕೋರಿರುವ ಅರ್ಜಿಗಳು, ಏಕ ನಿವೇಶನ ವಸತಿ ವಿನ್ಯಾಸ ಕೋರಿ ಮನವಿ, ಏಕ ನಿವೇಶನ ವಾಣಿಜ್ಯ ವಿನ್ಯಾಸ ನಕ್ಷೆ ಮಂಜೂರು ಕೋರಿರುವ ಅರ್ಜಿಗಳ ಬಗ್ಗೆ ಸಭೆಯಲ್ಲಿ ಸುದೀರ್ಘ ಚರ್ಚೆಗಳು ನಡೆದವು.
ಕರ್ನಾಟಕ ನಗರ ಮತ್ತು ಗ್ರಾಮಾಂತರ ಯೋಜನಾ ಕಾಯ್ದೆ 1961ರ ಕಲಂ 14(ಎ) ರನ್ವಯ ಭೂ-ಉಪಯೋಗ ಬದಲಾವಣೆ ಪ್ರಕರಣಗಳ ಜೊತೆಗೆ ಇನ್ನಿತರ ವಿಷಯಗಳ ಬಗ್ಗೆ ಈ ಸಭೆಯಲ್ಲಿ ಚರ್ಚೆ ನಡೆದವು.