ಹೊಸಪೇಟೆ: ತಾಲೂಕು ಪಂಚಾಯಿತಿ 19ನೇ ಸಾಮಾನ್ಯ ಸಭೆಯನ್ನು ತಾಲೂಕು ಪಂಚಾಯಿತಿ ಸದಸ್ಯರು ಬಹಿಷ್ಕರಿಸಿ ಇಂದು ಹೊರನಡೆದಿದ್ದಾರೆ. ನಾನಾ ಇಲಾಖೆ ಅಧಿಕಾರಿಗಳು ತಮ್ಮ ಸಹಾಯಕ ಅಧಿಕಾರಿಗಳನ್ನು ಸಭೆಗೆ ಕಳುಹಿಸಿದ್ದಾರೆ. ಇದರಿಂದ ಸಮಸ್ಯೆಗಳು ಪರಿಹಾರವಾಗುತ್ತಿಲ್ಲ ಎಂದು ತಿಳಿಸಿದ ತಾಪಂ ಸದಸ್ಯರು ಸಭೆಗೆ ಬಹಿಷ್ಕಾರ ಹಾಕಿದರು.
ಕೊರೊನಾ ಸಂದರ್ಭದಲ್ಲಿ ಜನರು ಸಮಸ್ಯೆಗಳಿಂದ ತತ್ತರಿಸಿ ಹೋಗಿದ್ದಾರೆ. ಎರಡು ತಿಂಗಳಿಗೊಮ್ಮೆ ಸಾಮಾನ್ಯ ಸಭೆಯನ್ನು ನಿಗದಿ ಮಾಡಲಾಗಿತ್ತು. ಸಭೆಗೆ ಸಮಯಕ್ಕೆ ಸರಿಯಾಗಿ ಅಧಿಕಾರಿಗಳು ಬರುವುದಿಲ್ಲ. ಅಲ್ಲದೇ, ಮುಂಚಿತವಾಗಿ ಅನುಪಾಲನ ವರದಿಯನ್ನು ನೀಡುವುದಿಲ್ಲ. ಹೀಗಾದರೆ ಸಮಸ್ಯೆಗಳ ಬಗ್ಗೆ ವಿಸ್ತೃತ ಚರ್ಚೆ ಮಾಡುವುದು ಹೇಗೆ. ಇದರಿಂದಾಗಿ ಜನರ ಸಮಸ್ಯೆ ಪರಿಹಾರ ಮಾಡಲು ಆಗುತ್ತಿಲ್ಲ. ಇಒ, ತಾಲೂಕು ಅಧ್ಯಕ್ಷರು, ಉಪಾಧ್ಯಕರು ಈ ಬಗ್ಗೆ ಯಾವುದೇ ಕ್ರಮ ಕೈಗೊಂಡಿಲ್ಲ ಎಂದು ಪಂಚಾಯಿತಿ ಸದಸ್ಯರು ಅಸಮಾಧಾನ ವ್ಯಕ್ತಪಡಿಸಿದರು.
ಕೃಷಿ ಇಲಾಖೆ, ಪಶು ಸಂಗೋಪನೆ ಇಲಾಖೆ, ಅರಣ್ಯ ಇಲಾಖೆ, ಕೆಇಬಿಯ ಪ್ರಮುಖ ಅಧಿಕಾರಿಗಳು ತಮ್ಮ ಸಹಾಯಕರನ್ನು ಕಳುಹಿಸಿದ್ದಾರೆ. ಲ್ಯಾಂಡ್ ಆರ್ಮಿ, ನಿರ್ಮಿತಿ ಕೇಂದ್ರ, ಎಸ್ಸಿ-ಎಸ್ಟಿ ಹಾಗೂ ಅಲ್ಪಸಂಖ್ಯಾತ, ಕರಡಿಧಾಮ, ಕಾರ್ಮಿಕ ಇಲಾಖೆ, ಸಣ್ಣ ನೀರಾವರಿ ಇಲಾಖೆ ಅಧಿಕಾರಿಗಳು ಸಭೆಗೆ ಗೈರಾಗಿದ್ದಾರೆ. ಬೆರಳೆಣಿಕೆ ಅಧಿಕಾರಿಗಳು ಮಾತ್ರ ಸಭೆಗೆ ಆಗಮಿಸಿದ್ದಾರೆ. ಇಂಥ ಪರಿಸ್ಥಿತಿಯಲ್ಲಿ ಚರ್ಚೆ ಮಾಡುವುದರಲ್ಲಿ ಯಾವುದೇ ಅರ್ಥವಿಲ್ಲ ಎಂದು ತಾಪಂ ಸದಸ್ಯರು ಸಭೆ ಬಹಿಷ್ಕರಿಸಿ ಹೊರ ನಡೆದರು.