ಬಳ್ಳಾರಿ: ನಗರದ ಹೊರವಲಯದ ತಾಳೂರು ರಸ್ತೆಯಲ್ಲಿರುವ ಗೋವಿಂದಪ್ಪ ಕಲ್ಯಾಣ ಮಂಟಪದಲ್ಲಿ ಗ್ರಾಮ ಸ್ವರಾಜ್ಯ ಸಮಾವೇಶ ಕಾರ್ಯಕ್ರಮ ನಡೆಯಿತು. ಈ ಕಾರ್ಯಕ್ರಮವನ್ನು ಉಪಮುಖ್ಯಮಂತ್ರಿ ಲಕ್ಷ್ಮಣ್ ಸವದಿ ಉದ್ಘಾಟಿಸಿದ್ದಾರೆ.
ಕಾರ್ಯಕ್ರಮದಲ್ಲಿ ಬಿಜೆಪಿ ರಾಜ್ಯ ಕಾರ್ಯದರ್ಶಿ ನವೀನ್ ಕುಮಾರ್ ಮಾತನಾಡಿ, ಜಿಲ್ಲೆಯ ಸಿರುಗುಪ್ಪ, ಸಂಡೂರು, ಕೌಲ್ ಬಜಾರ್, ಬಳ್ಳಾರಿ ಗ್ರಾಮೀಣ, ಕಂಪ್ಲಿ ಗ್ರಾಮ ಪಂಚಾಯಿತಿಗಳಲ್ಲಿ ಶೇ.99ರಷ್ಟು ಗೆಲುವು ಬಿಜೆಪಿಗಿದೆ. ಕೇಂದ್ರ ಮತ್ತು ರಾಜ್ಯ ಸರ್ಕಾರದ ಯೋಜನೆಗಳನ್ನು ಮನೆ, ಮನೆಗಳಿಗೆ ತಲುಪಿಸುವ ಕೆಲಸವನ್ನು ಬಿಜೆಪಿ ಕಾರ್ಯಕರ್ತರು ಮಾಡಬೇಕು ಎಂದರು.
ಗ್ರಾಮ ಸ್ವರಾಜ್ಯದಲ್ಲಿ ಕೊರೊನಾ ಮಾರ್ಗಸೂಚಿಗೆ ಡೋಂಟ್ಕೇರ್..!
ಸಭೆ-ಸಮಾರಂಭಗಳಿಗೆ ಇಷ್ಟೇ ಪ್ರಮಾಣದಲ್ಲಿ ಭಾಗವಹಿಸಬೇಕು ಸರ್ಕಾರದ ನಿಯಮವಿದೆ. ಆದರೆ ಈ ಸಮಾವೇಶದಲ್ಲಿ ಸಾವಿರಾರೂ ಜನರು ಯಾವುದೇ ಸಾಮಾಜಿಕ ಅಂತರ ಕಾಯ್ದುಕೊಳ್ಳದೆ ಭಾಗವಹಿಸಿದ್ದು, ಇವರ ಮೇಲೆ ಜಿಲ್ಲಾಡಳಿತ ಯಾವುದೇ ಕ್ರಮ ಕೈಗೊಂಡಿಲ್ಲ.
ಸಮಾವೇಶದಲ್ಲಿ ಜಿಲ್ಲಾ ಉಸ್ತುವಾರಿ ಆನಂದ್ ಸಿಂಗ್, ಸಮಾಜ ಕಲ್ಯಾಣ ಇಲಾಖೆ ಸಚಿವ ಶ್ರೀರಾಮುಲು, ಶಾಸಕರಾದ ಸೋಮಲಿಂಗಪ್ಪ, ಸೋಮಶೇಖರ್ ರೆಡ್ಡಿ, ಸಂಸದ ವೈ.ದೇವೆಂದ್ರಪ್ಪ, ಸಫಾಯಿ ಕರ್ಮಚಾರಿ ನಿಗಮ ಮಂಡಳಿಯ ಹನುಮಂತಪ್ಪ, ಬಿಜೆಪಿ ರಾಜ್ಯ ಕಾರ್ಯದರ್ಶಿ ನವೀನ್ ಕುಮಾರ್, ಜಿಲ್ಲಾ ರೈತ ಮೋರ್ಚಾದ ಅಧ್ಯಕ್ಷ ಗುರುಲಿಂಗನಗೌಡ, ಮಾಜಿ ಶಾಸಕ ನೇಮಿರಾಜ್ ನಾಯ್ಕ್, ಸಣ್ಣ ಫಕ್ಕಿರಪ್ಪ, ಮಾಜಿ ಸಂಸದೆ ಜೆ.ಶಾಂತಾ ಭಾಗವಹಿಸಿದ್ದರು.