ಬಳ್ಳಾರಿ: ಐಸಿಯುಗೆ ವಿದ್ಯುತ್ ಸರಬರಾಜಾಗುವ ಕೇಬಲ್ ಬ್ಲಾಸ್ಟ್ ಆಗಿರುವುದರಿಂದ ಈ ಸಮಸ್ಯೆಯಾಗಿದೆ. ಆದರೆ ರೋಗಿಗಳಿಗೆ ತೊಂದರೆಯಾಗದಂತೆ ಟ್ರಾಮ್ ಕೇರ್ ಸೆಂಟರ್ ಮತ್ತು ನ್ಯೂ ಓಟಿ ಬ್ಲಾಕ್ನಲ್ಲಿ ವೆಂಟಿಲೇಟರ್ ಇವೆ ಎಂದು ಜಿಲ್ಲಾಧಿಕಾರಿ ಪವನ್ ಕುಮಾರ್ ಮಾಲಪಾಟಿ ಹೇಳಿದ್ದಾರೆ.
ವಿಮ್ಸ್ನಲ್ಲಿ ವಿದ್ಯುತ್ ಕೈ ಕೊಟ್ಟಿದ್ದರಿಂದಲೇ ವೆಂಟಿಲೇಟರ್ ಇಲ್ಲದೇ ಇರುವುದರಿಂದ ಮನೋಜ್ ಮೃತಪಟ್ಟಿದ್ದಾನೆ ಎಂದು ಅವರ ಕುಟುಂಬಸ್ಥರು ಆರೋಪಿಸಿದ್ದರು. ಈ ಹಿನ್ನೆಲೆಯಲ್ಲಿ ಡಿಸಿ ಪವನ್ ಕುಮಾರ್ ಮಾಲಪಾಟಿ ಈ ಸ್ಪಷ್ಟನೆ ನೀಡಿದ್ದಾರೆ.
ಇಂದು ಸಂಜೆ ವಿಮ್ಸ್ನಲ್ಲಿ ಐಸಿಯುಗೆ ಭೇಟಿ ನೀಡಿದ ಸಂದರ್ಭದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಇಲ್ಲಿರುವ ಜನರೇಟರ್ ಹಳೆಯದಾಗಿರುವುದರಿಂದ ಈ ರೀತಿಯ ಸಮಸ್ಯೆಯಾಗಿದೆ. ಮೊನ್ನೆ ಸಂಜೆ ಟ್ರಾನ್ಸ್ಫಾರ್ಮರ್ ಸಮಸ್ಯೆ ಬಗ್ಗೆ ನಿರ್ದೇಶಕರು ನನ್ನ ಗಮನಕ್ಕೆ ತಂದಿದ್ದರು. ಕೂಡಲೇ ಚರ್ಚೆ ಮಾಡಿ 500 ಕೆವಿ ಜನರೇಟರ್ ವ್ಯವಸ್ಥೆ ಮಾಡುತ್ತಿದ್ದೇವೆ. ಜನರೇಟರ್ಗೂ ಮತ್ತು ಈ ಪ್ರಕರಣಕ್ಕೆ ಸಂಬಂಧವೇ ಇಲ್ಲ ಎಂದು ತಿಳಿಸಿದರು.
ಈಗಾಗಲೇ ಬಾಡಿಗೆ ಜನರೇಟರ್ನಲ್ಲಿಯೇ ವಿದ್ಯುತ್ ಸರಬರಾಜು ಮಾಡುತ್ತಿದ್ದಾರೆ. ಜನರೇಟರ್ ಆನ್ ಮಾಡಿದರೂ, ಕೇಬಲ್ ಬ್ಲಾಸ್ಟ್ ಆಗಿರುವುದರಿಂದ ಸಮಸ್ಯೆಯಾಗುತ್ತದೆ. ಐಸಿಯುನಲ್ಲಿ ಎರಡು ಕೇಬಲ್ ವ್ಯವಸ್ಥೆ ಮಾಡಬೇಕು. ಜೆಸ್ಕಾಂ ಅವರ ಪ್ರಕಾರ, ಇದು ಸುಮಾರು 40 ವರ್ಷಗಳಷ್ಟು ಹಳೆಯದು ಆಗಿರುವುದರಿಂದ ಲೈನ್ ಇಂಟರ್ಲಿಂಗ್ ಆಗಿರಬಹುದೆಂದು ಹೇಳುತ್ತಿದ್ದಾರೆ ಎಂದರು.
ಟ್ರಾಮಾ ಕೇರ್ ಸೆಂಟರ್ನಲ್ಲಿ 96 ವೆಂಟಿಲೇಟರ್ ಹಾಸಿಗೆಗಳ ವ್ಯವಸ್ಥೆ ಇದೆ. ಇನ್ನು ನ್ಯೂ ಓಟಿ ಕೇರ್ನಲ್ಲೂ ವೆಂಟಿಲೇಟರ್ ವ್ಯವಸ್ಥೆ ಇದೆ. ಹೊಸದಾಗಿ ಬರುವ ಎಲ್ಲ ಪ್ರಕರಣಗಳನ್ನು ಅಲ್ಲಿಗೆ ಕಳುಹಿಸುತ್ತಿದ್ದಾರೆ ಎಂದು ತಿಳಿಸಿದರು. ಈ ಸಂದರ್ಭದಲ್ಲಿ ವಿಮ್ಸ್ ನಿರ್ದೇಶಕರಾದ ಗಂಗಾಧರಗೌಡ ವೈದ್ಯರು ಇದ್ದರು.
ಏನಿದು ಘಟನೆ: ಗಣಿನಾಡು ಬಳ್ಳಾರಿಯ ವಿಮ್ಸ್ ಆಸ್ಪತ್ರೆಯ ಐಸಿಯುನಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಚೆಟ್ಟಮ್ಮ (30) ಹಾಗೂ ಮೌಲಾಹುಸೇನ್ (38) ಚಂದ್ರಮ್ಮ (65) ಮೂವರು ಏಕಾಏಕಿ ಮೃತಪಟ್ಟಿದ್ದರು ಎಂದು ವರದಿಯಾಗಿತ್ತು. ಆಸ್ಪತ್ರೆಯಲ್ಲಿ ಐಸಿಯುಗೆ ಪೂರೈಕೆ ಆಗುತ್ತಿದ್ದ ವಿದ್ಯುತ್ ಕಡಿತವೇ ಈ ಸಾವುಗಳಿಗೆ ಪ್ರಮುಖ ಕಾರಣ ಎಂದು ಹೇಳಲಾಗುತ್ತಿದೆ.
ವಿಮ್ಸ್ ಆಸ್ಪತ್ರೆಯಲ್ಲಿ ಇದೇ ತಿಂಗಳು 12 ರಂದು ವಿದ್ಯುತ್ ಸಂಪರ್ಕ ಕಡಿತವಾಗಿತ್ತಂತೆ. 3-4 ತಾಸು ಕಳೆದರೂ ವಿದ್ಯುತ್ ಬಂದಿರಲಿಲ್ಲವಂತೆ. ಐಸಿಯು ವಾರ್ಡ್ನಲ್ಲಿದ್ದ ಮೂವರು ಆಕ್ಸಿಜನ್ ಸಮಸ್ಯೆ ಉಂಟಾಗಿ ಸಾವನ್ನಪ್ಪಿದ್ದಾರೆ ಎಂಬ ಆರೋಪಗಳು ಕೇಳಿ ಬರುತ್ತಿವೆ. ಆದರೆ, ಇದೇ ವೇಳೆ ಮನೋಜ್ ಎನ್ನುವ ಯುವಕ ಕೂಡ ಸಾವನ್ನಪ್ಪಿದ್ದಾರೆ ಎಂಬ ಮಾಹಿತಿ ಈಗ ಹೊರಗೆ ಬಂದಿದೆ.
ಓದಿ: ವಿಮ್ಸ್ ಆಸ್ಪತ್ರೆಯಲ್ಲಿ ಸಾವನ್ನಪ್ಪಿದ್ದು ಮೂವರಲ್ಲ ನಾಲ್ಕು ಜನ.. ಮೃತ ಮನೋಜ್ ಕುಟುಂಬಸ್ಥರ ಆರೋಪ