ಬಳ್ಳಾರಿ: ಭಾನುವಾರದ ಲಾಕ್ಡೌನ್ಗೆ ಜನರಿಂದ ಮಿಶ್ರ ಪ್ರತಿಕ್ರಿಯೆ ವ್ಯಕ್ತವಾಗಿದ್ದು, ಜನರು ಸಾಮಾನ್ಯವಾಗಿ ಹೊರಗಡೆ ಓಡಾಡುತ್ತಿದ್ದರು. ಬಳ್ಳಾರಿಯ ಜನರಲ್ಲಿ ಜಾಗೃತಿ ಮೂಡಿಸುವುದಕ್ಕೆ ದುರ್ಗಾ ಪಡೆ ಫೀಲ್ಡಿಗಿಳಿದಿದೆ. ಬಳ್ಳಾರಿಯಲ್ಲಿ ಮಹಿಳಾ ಸಂರಕ್ಷಣೆಗಂತಲೇ ವಿಶೇಷವಾಗಿ ರಚಿಸಲಾಗಿರುವ ಪೊಲೀಸರ ತಂಡವೇ ದುರ್ಗಾಪಡೆ.
ದುರ್ಗಾಪಡೆಯ ಮಹಿಳಾ ಪೊಲೀಸ್ ಸಿಬ್ಬಂದಿ ಇಂದು ಬಳ್ಳಾರಿ ನಗರವನ್ನು ಸೈಕಲ್ನಲ್ಲಿ ಸುತ್ತಿದರು. ಸೈಕಲ್ ಜಾಥಾ ಮಾಡುವುದರ ಮೂಲಕ ಜನ ಜಾಗೃತಿ ಮೂಡಿಸುವುದಕ್ಕೆ ಪ್ರಯತ್ನಿಸಿದರು.
ರಾಯಲ್ ಸರ್ಕಲ್, ಬೆಂಗಳೂರು ರಸ್ತೆಯಲ್ಲಿ ಸೈಕಲ್ ಸವಾರಿ ಮಾಡಿ ಅಲ್ಲಿನ ಜನರಿಗೆ ಲಾಕ್ಡೌನ್ ಇರೋದ್ರಿಂದ ತುರ್ತು ಸಂದರ್ಭ ಬಿಟ್ಟು ಹೊರಗಡೆ ಬರದಂತೆ ತಿಳುವಳಿಕೆ ಮೂಡಿಸಿದರು.
ವಾಹನ ಸವಾರರು ಸಂಡೇ ಲಾಕ್ಡೌನ್ಗೂ ನಮಗೂ ಸಂಬಂಧವೇ ಇಲ್ಲ ಎಂಬಂತಿದ್ದರು. ಇನ್ನು ಆಟೋ ಚಾಲಕರು ಮತ್ತು ಬೈಕ್ ಸವಾರರಿಗೆ ಪೊಲೀಸರು ಲಾಠಿ ರುಚಿ ತೋರಿಸಿದ್ದಾರೆ.
ಜಿಲ್ಲೆಯ ಹೊಸಪೇಟೆ, ಹಡಗಲಿ, ಹಗರಿಬೊಮ್ಮನಹಳ್ಳಿ, ಸಂಡೂರು, ಕುರುಗೋಡು, ಕೊಟ್ಟೂರು, ಕಂಪ್ಲಿ, ಸಿರುಗುಪ್ಪ, ಕೂಡ್ಲಿಗಿ ತಾಲೂಕಿನ ಪೊಲೀಸ್ ಠಾಣೆಗಳ ಪಿಎಸ್ಐಗಳು ಸೈಕಲ್ ಜಾಥಾ ಮಾಡಿ ಜನರಿಗೆ ಜಾಗೃತಿ ಮೂಡಿಸಿದರು.
ಕಳೆದ ವಾರದ ಲಾಕ್ಡೌನ್ ಸಂದರ್ಭದಲ್ಲಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಸಿ.ಕೆ ಬಾಬಾ ಅವರು ಸೈಕಲ್ ಸವಾರಿ ಮಾಡಿ ಚೆಕ್ ಪೋಸ್ಟ್ ಮತ್ತು ಇತರೆಡೆ ಪರಿಶೀಲನೆ ನಡೆಸಿದ್ದರು.