ಬಳ್ಳಾರಿ: ಜಿಲ್ಲೆಯ ಕೂಡ್ಲಿಗಿ ತಾಲೂಕಿನ ಹೊಸಳ್ಳಿ ಹೋಬಳಿ ವ್ಯಾಪ್ತಿಯ ಜುಟ್ಟಲಿಂಗನಹಟ್ಟಿ ಗ್ರಾಮ ಹೊರವಲಯದಲ್ಲಿ
ಬೆಳೆದ ಜೋಳದ ಬೆಳೆಯನ್ನ ಯಾರೋ ಕಿಡಿಗೇಡಿಗಳು ನಾಶಪಡಿಸಿದ್ದು, ಬೆಳೆ ಸಮೀಕ್ಷೆ ವೇಳೆ ಈ ಪ್ರಕರಣ ಬೆಳಕಿಗೆ ಬಂದಿದೆ.
ಜುಟ್ಟಲಿಂಗನಹಟ್ಟಿ ಗ್ರಾಮದ ರೈತ ಗುರುಸ್ವಾಮಿ ಎಂಬುವರು ತಮ್ಮ 3 ಎಕರೆ ಭೂಮಿಯಲ್ಲಿ ಹೈಬ್ರಿಡ್ ತಳಿಯ ಜೋಳ ಬಿತ್ತನೆ ಮಾಡಿದ್ದಾರೆ. ಇದಲ್ಲದೇ ಈ ಜೋಳದ ಬೆಳೆಯು ಅತ್ಯುತ್ತಮವಾಗಿ ಫಸಲಿಗೆ ಬಂದಿದೆ. ಜೋಳದ ತೆನೆಯಲ್ಲಿ ಜೋಳದ ಕಾಳು ಕಟ್ಟಿದೆ. ಇನ್ನೇನು ಕಟಾವಿಗೆ ಬರುವ ಹಂತಕ್ಕೆ ತಲುಪಿರೋ ಈ ಸಮಯದಲ್ಲಿ ಯಾರೋ ದುಷ್ಕರ್ಮಿಗಳು ಹೊಲಕ್ಕೆ ನುಗ್ಗಿ ಉತ್ತಮ ಫಸಲಿನಿಂದ ಬೆಳೆದು ನಿಂತ ಜೋಳದ ಬೆಳೆಯನ್ನ ನೆಲೆಕ್ಕುರುಳಿಸಿ ಬೆಳೆ ನಾಶಪಡಿಸಿದ್ದಾರೆ.
ಕೃಷಿ ಇಲಾಖೆಯ ಅಧಿಕಾರಿಗಳೊಂದಿಗೆ ರೈತರು ಬೆಳೆ ಸಮೀಕ್ಷೆಗೆಂದು ಹೋದಾಗ ಈ ವಿಷಯ ಬೆಳಕಿಗೆ ಬಂದಿದೆ. ಮಾಹಿತಿ ತಿಳಿದ ಕೂಡಲೇ ಕಂದಾಯ ಅಧಿಕಾರಿಗಳು ಜಮೀನಿಗೆ ಭೇಟಿ ನೀಡಿ ಪರಿಸೀಲಿಸಿದ್ದು ಈ ಜೋಳದ ಬೆಳೆಯನ್ನು ಕಾಡು ಪ್ರಾಣಿಗಳು ನಾಶ ಪಡಿಸಿಲ್ಲ. ಪಕ್ಕದ ಜಮೀನಿನಲ್ಲಿರುವ ಬೆಳೆ ಕೂಡ ನಾಶವಾಗಿಲ್ಲ. ಅಲ್ಲದೆ, ಕಾಡು ಹಂದಿ, ಕರಡಿಗಳಾಗಿದ್ದರೆ ತೆನೆ ಜೊತೆಗೆ ದಂಟು ತಿನ್ನುತ್ತವೆ ಹಾಗೂ ಘಟನೆ ನೋಡಿದರೆ ಯಾವುದೇ ಪ್ರಾಣಿಗಳು ತಿಂದಿಲ್ಲವೆನುಸುತ್ತದೆ. ಯಾರೋ ಕಿಡಿಗೇಡಿ ಗಳಿಂದಲೇ ಈ ಘಟನೆ ನಡೆದಿರಬಹುದೆಂಬ ಸಂಶಯವೂ ಕೂಡ ಈ ವೇಳೆ ವ್ಯಕ್ತವಾಗಿದೆ.
ಈರುಳ್ಳಿಗೆ ಕೊಳೆ ರೋಗ ಬೇಸತ್ತ ರೈತನಿಂದ ಬೆಳೆ ನಾಶ: ಜಿಲ್ಲೆಯ ಹಗರಿಬೊಮ್ಮನಹಳ್ಳಿ ತಾಲೂಕಿನ ಬನ್ನಿಗೋಳದಲ್ಲಿ ಮೈನಳ್ಳಿ ಕೊಟ್ರೇಶಪ್ಪ ಎಂಬ ರೈತ ತನ್ನ 3 ಎಕರೆ ಭೂಮಿಯಲ್ಲಿ ಬೆಳೆದ ಈರುಳ್ಳಿ ಬೆಳೆಯು ಸಂಪೂರ್ಣ ಕೊಳೆರೋಗಕ್ಕೆ ತುತ್ತಾಗಿದೆ. ಅದರಿಂದ ಬೇಸತ್ತ ರೈತ ತನ್ನ ಬೆಳೆಯನ್ನು ಟ್ರ್ಯಾಕ್ಟರ್ ಮೂಲಕ ನಾಶಪಡಿಸಿದ್ದಾರೆ.
ಹಗರಿಬೊಮ್ಮನಹಳ್ಳಿ ತಾಲೂಕಿನ ಬನ್ನಿಗೋಳ, ತಂಬ್ರಹಳ್ಳಿ, ವರಲಹಳ್ಳಿ, ನೆಲ್ಕುದ್ರಿ ಎರಡನೇ ಕಾಲೊನಿ, ಉಪ್ಪಾರಗಟ್ಟೆಯಲ್ಲಿ, ಕನ್ನಿಹಳ್ಳಿ, ಅಲಬೂರು, ಅಂಬಳಿ ಸೇರಿದಂತೆ ಅನೇಕ ಕಡೆ ಈರುಳ್ಳಿ ಬೆಳೆಗೆ ಹೆಚ್ಚು ಒತ್ತುನೀಡಿ ಬಿತ್ತನೆಯಲ್ಲಿ ಅತಿ ಹೆಚ್ಚು ಬಿತ್ತನೆಕೂಡ ಆಗಿತ್ತು. ಈಗ ರೈತರು ತಾವು ಬೆಳೆದು ನಿಂತ ಬೆಳೆಯನ್ನೇ ನಾಶ ಮಾಡುವಂತ ಪರಿಸ್ಥಿತಿಗೆ ಬಂದು ತಲುಪಿದ್ದಾರೆ.