ವಿಜಯನಗರ: ನಾಲ್ಕು ಕಾಲುಗಳನ್ನು ಹೊಂದಿರುವ ಪ್ರಾಣಿಗಳು, ನಾಲ್ಕು ಕಾಲಿನ ಮರಿಗಳನ್ನು ಹಾಕುವುದು ಸಹಜ, ಆದರೆ ಇಲ್ಲೊಂದು ಹಸು ಅಪರೂಪದ ವಿಶಿಷ್ಟ ಎರಡು ಕಾಲು ಹೊಂದಿರುವ ಹೆಣ್ಣು ಕರುವಿಗೆ ಜನ್ಮ ನೀಡಿದ ಘಟನೆ ಜಿಲ್ಲೆಯ ಕೂಡ್ಲಿಗಿ ತಾಲೂಕಿನ ಗುಡೇಕೋಟೆ ಗ್ರಾಮದಲ್ಲಿ ನಡೆದಿದೆ.
ರೈತ ಪುಂಡಿ ವಿಜಯಕುಮಾರ್ ಎಂಬವರಿಗೆ ಸೇರಿದ ಹಸು ಎರಡೇ ಕಾಲುಗಳಿರೋ ಹೆಣ್ಣು ಕರುವಿಗೆ ಜನ್ಮ ನೀಡಿದೆ. ಕರುವಿಗೆ ಎರಡೇ ಕಾಲು ಇರೋದು ಕಂಡು ಗ್ರಾಮಸ್ಥರಿಗೆ ಆಶ್ಚರ್ಯವಾಗಿದೆ. ಸದ್ಯ ಕರು ಹಾಗೂ ತಾಯಿ ಹಸು ಆರೋಗ್ಯವಾಗಿದೆ ಎಂದು ಮಾಲೀಕರು ತಿಳಿಸಿದ್ದಾರೆ. ಕಳೆದ ವರ್ಷಗಳ ಹಿಂದೆ ತಾಲೂಕಿನ ಚೌಡಪುರ ಗ್ರಾಮದಲ್ಲೂ ಎರಡು ಕಾಲು ಇರೋ ಕರು ಜನನವಾಗಿತ್ತು. ಇಂತಹ ಅಪರೂಪದ ಕರು ಇದೀಗ ಗುಡೇಕೋಟೆ ಗ್ರಾಮದಲ್ಲಿ ಜನಿಸಿದೆ.
![cow-given-birth-to-two-legs-unique-calve-in-vijayanagara](https://etvbharatimages.akamaized.net/etvbharat/prod-images/28-07-2023/19122357_thumbn.jpg)
ಇದನ್ನೂ ಓದಿ: ಎರಡು ತಲೆ ಇರುವ ಕರುವಿಗೆ ಜನ್ಮ ನೀಡಿದ ಹಸು: ವಿಶೇಷ ಪೂಜೆ ಸಲ್ಲಿಸಿದ ಗ್ರಾಮಸ್ಥರು
ತುಮಕೂರಿನಲ್ಲಿ ನಾಲ್ಕು ಕರುಗಳಿಗೆ ಜನ್ಮ ನೀಡಿದ್ದ ಹಸು: ಇತ್ತೀಚಿಗೆ, ಹಸುವೊಂದು ನಾಲ್ಕು ಕರುಗಳಿಗೆ ಜನ್ಮ ನೀಡಿದ್ದ ಅಪರೂಪದ ಘಟನೆ ತುಮಕೂರು ಜಿಲ್ಲೆಯ ಗುಬ್ಬಿ ತಾಲೂಕಿನ ಚೇಳೂರು ಹಟ್ಟಿಯಲ್ಲಿ ನಡೆದಿತ್ತು. ಮುನಿಯಪ್ಪ ಮತ್ತು ಕರಿಯಮ್ಮ ಎಂಬವರಿಗೆ ಸೇರಿದ ಹಸು 3 ಗಂಡು ಮತ್ತು 1 ಹೆಣ್ಣು ಕರುಗಳಿಗೆ ಜನ್ಮ ನೀಡಿತ್ತು. ವಿಷಯ ತಿಳಿದು ಸ್ಥಳಕ್ಕೆ ಭೇಟಿ ನೀಡಿದ ಚೇಳೂರು ಪಶು ವೈದ್ಯಾಧಿಕಾರಿ ಡಾ. ಶಂಕರಪ್ಪ ತಪಾಸಣೆ ನಡೆಸಿದ್ದರು. ಒಂದು ಗಂಡು ಕರು ಹುಟ್ಟಿದ ತಕ್ಷಣ ಮೃತಪಟ್ಟಿತ್ತು. ಮೂರು ಕರುಗಳು ಆರೋಗ್ಯವಾಗಿವೆ ಎಂದು ಅವರು ತಿಳಿಸಿದ್ದರು.
ಗದಗ್ನಲ್ಲೂ ಇಂಥದ್ದೇ ಘಟನೆ: ಕೆಲವು ದಿನಗಳ ಹಿಂದೆ ಗದಗ ಜಿಲ್ಲೆಯಲ್ಲೂ ಹಸುವೊಂದು ಮೂರು ಕರುಗಳಿಗೆ ಜನ್ಮ ಕೊಟ್ಟಿತ್ತು. ಗಜೇಂದ್ರಗಡ ತಾಲೂಕಿನ ಲಕ್ಕಲಕಟ್ಟಿ ಗ್ರಾಮದಲ್ಲಿ ಖಾದೀರ್ ಸಾಬ್ ನದಾಫ್ ಎಂಬ ರೈತನ ಹಸು ತ್ರಿವಳಿ ಕರುಗಳನ್ನು ಹಾಕಿತ್ತು. ಲಕ್ಷ್ಮಿ ಎಂಬ ಹೆಸರಿನ ಜರ್ಸಿ ತಳಿ ಇದಾಗಿತ್ತು.
ಚಿತ್ರದುರ್ಗದ ಘಟನೆ : ಚಿತ್ರದುರ್ಗದ ಹಿರಿಯೂರು ತಾಲೂಕಿನ ಐಮಂಗಲ ಹೋಬಳಿಯ ಮಲ್ಲಪ್ಪನಹಳ್ಳಿಯಲ್ಲಿ ಹಸುವೊಂದು ಮೂರು ಹೆಣ್ಣು ಕರುಗಳಿಗೆ ಜನ್ಮ ನೀಡಿತ್ತು. ಮಲ್ಲಪ್ಪನಹಳ್ಳಿ ಗ್ರಾಮದ ಮೂರ್ಕಣಪ್ಪ ಎಂಬವರಿಗೆ ಸೇರಿದ ಹಸು ಇದಾಗಿತ್ತು. ಮೂರು ಕರುಗಳು ಒಂದೇ ದಿನ 5 ನಿಮಿಷಗಳ ಕಾಲಾವಧಿಯಲ್ಲಿ ಹುಟ್ಟಿದ್ದವು.
ರಾಮನಗರದಲ್ಲಿ 3 ಕರುಗಳಿಗೆ ಜನ್ಮ ನೀಡಿದ್ದ ಹಸು : ಇಲ್ಲಿಯ ಕೈಲಾಂಚ ಹೋಬಳಿ ಜಕ್ಕನಹಳ್ಳಿ ಗ್ರಾಮದಲ್ಲಿ ಹಸುವೊಂದು ಮೂರು ಕರುಗಳಿಗೆ ಜನ್ಮ ಕೊಟ್ಟಿತ್ತು. ಶೇಖರ್ ಎಂಬವರು ತಮ್ಮ ಮನೆಯಲ್ಲಿ ಸಾಕಿದ್ದ ಸೀಮೆ ಹಸು 2 ಗಂಡು ಮತ್ತು ಒಂದು ಹೆಣ್ಣು ಕರು ಹಾಕಿತ್ತು. ಮೂರು ಕರುಗಳ ಪೈಕಿ ಎರಡು ಗಂಡು ಕರುಗಳು ಹುಟ್ಟಿದ ಕೆಲವೇ ಕ್ಷಣಗಳಲ್ಲಿ ಸಾವನ್ನಪ್ಪಿದ್ದವು.
ಇದನ್ನೂ ಓದಿ: ಗೌರಿಕೆರೆ ಮಠದಲ್ಲಿ ವಿಚಿತ್ರ ಕರುವಿಗೆ ಜನ್ಮ ನೀಡಿದ ಎಮ್ಮೆ.. ವಿಡಿಯೋ ನೋಡಿ