ಬಳ್ಳಾರಿ: ಕಳೆದ ವರ್ಷಾರಂಭದಲ್ಲಿ ದೇಶಕ್ಕೆ ಮಹಾಮಾರಿ ಕೊರೊನಾ ವಕ್ಕರಿಸಿತು. ಬಳಿಕ ಸೃಷ್ಟಿಯಾದ ಸಮಸ್ಯೆ ಎಲ್ಲರಿಗೂ ತಿಳಿದಿರುವ ವಿಚಾರ. ಒಂದೊತ್ತಿನ ಊಟಕ್ಕೂ ಪರದಾಟ. ಜೀವನ ನಿರ್ವಹಣೆ ಕಷ್ಟಸಾಧ್ಯ. ಇಂತಹ ಪರಿಸ್ಥಿತಿಯಲ್ಲಿ ಅದೆಷ್ಟೋ ಮಕ್ಕಳು ತಮ್ಮ ವಿದ್ಯಾಭ್ಯಾಸ ತೊರೆದು ಕೆಲಸಕ್ಕೆ ತೆರಳಿದ್ದಾರೆ. ಗಣಿಜಿಲ್ಲೆಯಲ್ಲಿ ಪರಿಸ್ಥಿತಿ ಹೇಗಿದೆ, ಇಲ್ಲಿದೆ ಕೆಲ ಮಾಹಿತಿ..
ಸೋಂಕು ಹರಡುವಿಕೆ ಹಿನ್ನೆಲೆ ಲಾಕ್ಡೌನ್ ಘೋಷಣೆಯಾಯ್ತು. ಶಾಲಾ - ಕಾಲೇಜು ರಜೆ ಇದ್ದ ಕಾರಣ ಗಣಿಜಿಲ್ಲೆಯಲ್ಲಿ ಬಾಲಕಾರ್ಮಿಕ ಪದ್ಧತಿ ಗಣನೀಯ ಪ್ರಮಾಣದಲ್ಲಿ ಏರಿಕೆ ಕಂಡಿತು. ಶೇಕಡಾ 30 ರಷ್ಟು ಬಾಲಕಾರ್ಮಿಕರು ನಾನಾ ವಲಯಗಳಲ್ಲಿನ ಕೆಲಸಕ್ಕೆ ಸೇರಿಕೊಂಡಿರುವ ಮಾಹಿತಿ ಸಮೀಕ್ಷೆಯಿಂದ ಬೆಳಕಿಗೆ ಬಂದಿದೆ.
ತುತ್ತು ಅನ್ನಕ್ಕಾಗಿ ಪರದಾಟ - ಕೆಲಸಕ್ಕೆ ಹೋಗಲು ಕಾರಣ:
ಹೌದು, ಗಣಿ ಜಿಲ್ಲೆಯ ನಾನಾ ಸರ್ಕಾರಿ ಶಾಲೆಗಳಲ್ಲಿ ವಿದ್ಯಾಭ್ಯಾಸ ಮಾಡುವ ಬಹುತೇಕ ವಿದ್ಯಾರ್ಥಿಗಳು ಬಡ ಮತ್ತು ಕೂಲಿ ಕಾರ್ಮಿಕ ಕುಟುಂಬಕ್ಕೆ ಸೇರಿದ್ದಾರೆ. ಮಧ್ಯಾಹ್ನ ಬಿಸಿಯೂಟ ವ್ಯವಸ್ಥೆ ಇರುವ ಕಾರಣಕ್ಕೆ ಅನೇಕ ವಿದ್ಯಾರ್ಥಿಗಳು ಸರ್ಕಾರಿ ಶಾಲೆಗಳಿಗೆ ಸೇರಿಕೊಂಡಿದ್ದರು. ಪೋಷಕರ ಒಂದೊತ್ತಿನ ಊಟದ ಭಾರವನ್ನು ಕಡಿಮೆ ಮಾಡುವ ಮಹತ್ವದ ಯೋಜನೆಯೇ ಈ ಬಿಸಿಯೂಟ ವ್ಯವಸ್ಥೆ. ಆದರೆ, ಏಕಾಏಕಿ ಈ ಸರ್ಕಾರಿ ಶಾಲೆಗಳು ಕೊರೊನಾ ಹಿನ್ನೆಲೆ ಮುಚ್ಚಿದ ಕಾರಣ ಸಾಕಷ್ಟು ವಿದ್ಯಾರ್ಥಿಗಳ ಮನೆಯಲ್ಲಿ ತುತ್ತು ಅನ್ನಕ್ಕಾಗಿ ಪರದಾಟ ನಡೆಸುವ ವಾತಾವರಣ ಸೃಷ್ಟಿಯಾಗಿತ್ತು.
ಬಾಲಕಾರ್ಮಿಕರ ಸಂಖ್ಯೆಯಲ್ಲಿ ಹೆಚ್ಚಳ:
ಲಾಕ್ಡೌನ್ ತೆರವಾಗಿ ನಾನಾ ವಲಯಗಳು ಕಾರ್ಯಾರಂಭ ಆದ ಬಳಿಕ, ಜೀವನ ನಿರ್ವಹಣೆ ಸಲುವಾಗಿ ಪೋಷಕರು ತಮ್ಮ ಮಕ್ಕಳನ್ನೂ ಕೂಡ ಅನಿವಾರ್ಯವಾಗಿ ಕೆಲಸಕ್ಕೆ ಕರೆದೊಯ್ಯುವ ಪದ್ಧತಿ ಸದ್ದಿಲ್ಲದೇ ಶುರುವಾಯಿತು. ಬಹುತೇಕ ಬಡ ಮತ್ತು ಕೂಲಿಕಾರ್ಮಿಕ ಕುಟುಂಬಗಳು ತಮ್ಮ ಆರ್ಥಿಕ ಮಟ್ಟದ ಸುಧಾರಣೆಗೋಸ್ಕರ ತಮ್ಮ ಮಕ್ಕಳನ್ನು ತಮ್ಮೊಂದಿಗೆ ಕೆಲಸಕ್ಕೆ ಕರೆದೊಯ್ಯಬೇಕಾಯಿತು. ಹೀಗಾಗಿ ಜಿಲ್ಲಾದ್ಯಂತ ಬಾಲಕಾರ್ಮಿಕರ ಪ್ರಮಾಣ ಹೆಚ್ಚಾಯಿತು. 2018ರಲ್ಲಿನ ಸಮೀಕ್ಷೆಯ ಪ್ರಕಾರ ಹೋಲಿಕೆ ಮಾಡಿದರೆ, ಈ ಸಾಲಿನಲ್ಲಿ ಅನಿವಾರ್ಯವಾಗಿ ಬಾಲಕಾರ್ಮಿಕರ ಸಂಖ್ಯೆ ಹೆಚ್ಚಾಗಿರುವುದು ಬೆಳಕಿಗೆ ಬಂದಿದೆ.
ಈ ಸುದ್ದಿಯನ್ನೂ ಓದಿ: ಕೋವಿಡ್-ಲಾಕ್ಡೌನ್ ಎಫೆಕ್ಟ್: ಕೆಲಸಕ್ಕೆ ಹೋದ ಮಕ್ಕಳು ಶಾಲೆಯತ್ತ ಬರುವ ಆಸಕ್ತಿ ಕಳೆದುಕೊಂಡರೇ?
ಈ ಕುರಿತು ರಾಷ್ಟ್ರೀಯ ಬಾಲ ಕಾರ್ಮಿಕ ಪದ್ಧತಿ ನಿರ್ಮೂಲನಾ ಯೋಜನೆಯ ನಿರ್ದೇಶಕ ಎ. ಮೌನೇಶ ಪ್ರತಿಕ್ರಿಯಿಸಿದ್ದು, ಬಾಲಕಾರ್ಮಿಕ ಪದ್ಧತಿಯು ಸದ್ಯ ಹೆಚ್ಚಾಗಿದೆ. ಅದನ್ನು ನಿಯಂತ್ರಿಸಲು ಶತಾಯಗತಾಯವಾಗಿ ಶ್ರಮಿಸಿದರೂ ಕೂಡ ನಮಗೆ ಅನೇಕ ಸವಾಲುಗಳು ಪೋಷಕರಿಂದ ಬಂದಿದೆ. ಅದಾಗ್ಯೂ ಕೂಡ ಪೋಷಕರ ಮನವೊಲಿಸಿ ಬಾಲಕಾರ್ಮಿಕ ಪದ್ಧತಿಯಿಂದ ಒಂದಿಷ್ಟು ಮಂದಿಯನ್ನು ದೂರಾಗಿಸಿದ್ದೇವೆ. ಬಾಲಕಾರ್ಮಿಕರನ್ನು ರಕ್ಷಿಸಿ, ಬಾಲಕಾರ್ಮಿಕರ ಪೋಷಣಾ ವಸತಿ ನಿಲಯಗಳಲ್ಲಿ ಇರಿಸಲು ಸದ್ಯ ಅವಕಾಶ ಕಲ್ಪಿಸಲಾಗಿಲ್ಲ. ಕೋವಿಡ್ ಹಿನ್ನೆಲೆ ಜಿಲ್ಲೆಯ ಎಂಟು ಬಾಲಕಾರ್ಮಿಕರ ಪೋಷಣಾ ವಸತಿ ನಿಲಯಗಳು ತಾತ್ಕಾಲಿಕವಾಗಿ ಬಂದ್ ಆಗಿವೆ. ಹೀಗಾಗಿ, ರಕ್ಷಣೆ ಮಾಡಿದ ಎಲ್ಲ ಬಾಲಕಾರ್ಮಿಕರನ್ನು ಅವರವರ ಪೋಷಕರಿಗೆ ಒಪ್ಪಿಸಲಾಗಿದೆಯೆಂದು ಮಾಹಿತಿ ನೀಡಿದ್ರು.