ಬಳ್ಳಾರಿ: ಕೊರೊನಾ ವೈರಸ್ ಭೀತಿ ಹಿನ್ನೆಲೆಯಲ್ಲಿ ಜಿಲ್ಲೆಯ ಕೊಟ್ಟೂರಿನಲ್ಲಿ ನೂರು ರೂಗೆ ಒಂದು ಕೋಳಿ ಎಂದು ಕೂಗುತ್ತಾ ಮಾರಾಟಕ್ಕೆ ಮುಂದಾಗಿರೊ ದೃಶ್ಯಗಳು ಕಂಡು ಬಂದವು.
ಹಕ್ಕಿ ಜ್ವರ ಹಾಗೂ ಕೊರೊನಾ ಕುರಿತು ಸುದ್ದಿ ಹಬ್ಬಿದ್ದ ಹಿನ್ನೆಲೆಯಲ್ಲಿ ಕೋಳಿಗಳ ಮಾರಾಟ ಗಣನೀಯ ಪ್ರಮಾಣದಲ್ಲಿ ಕಡಿಮೆಯಾಗಿದ್ದು, ಫಾರಂ ಮಾಲೀಕರು ಬೀದಿಗಿಳಿದು ಕೋಳಿಗಳ ಮಾರಾಟಕ್ಕೆ ಮುಂದಾಗಿದ್ದಾರೆ.
ಕೊಟ್ಟೂರಿನ ಸುಗುಣಾ ಕಂಪನಿಯ ಮಾಲೀಕರು ಕೋಳಿಗಳನ್ನು ನೂರು ರೂಪಾಯಿ ಒಂದರಂತೆ ಮಾರಾಟ ಮಾಡುತ್ತಿದ್ದಾರೆ. ಈ ಮೊದಲು ಒಂದು ಕೆಜಿ ಕೋಳಿ ಮಾಂಸಕ್ಕೆ 150 ರೂಪಾಯಿ ಇತ್ತಾದ್ರೂ, ಈಗ 3 ಕೆ.ಜಿ ತೂಕ ಇರುವ ಒಂದು ಕೋಳಿಯನ್ನು ನೂರು ರೂಪಾಯಿಗೆ ಮಾರಾಟ ಮಾಡುತ್ತಿದ್ದಾರೆ. ಆದರೆ ಜನ ಕೋಳಿಯನ್ನು ಖರೀದಿಸುತ್ತಿಲ್ಲ.
ಕೋಳಿ ಫಾರಂಗಳು ಭಾರೀ ಪ್ರಮಾಣದ ನಷ್ಟ ಅನುಭವಿಸಿದ್ದು, ಕೇವಲ ಕೊಟ್ಟೂರಿನಲ್ಲಿ ಮಾತ್ರವಲ್ಲ ಜಿಲ್ಲೆಯ ಬಹುತೇಕ ಭಾಗಗಳಲ್ಲಿ ಕೋಳಿ ಫಾರಂನಲ್ಲಿ ಕೋಳಿ ಕೊಳ್ಳುವವರ ಸಂಖ್ಯೆ ಸಾಕಷ್ಟು ಕಮ್ಮಿಯಾಗಿದೆ.