ವಿಜಯನಗರ: ಅಡುಗೆ ಎಣ್ಣೆ ಲಾರಿ ಅಪಘಾತಕ್ಕೀಡಾದ ಘಟನೆ ಕೂಡ್ಲಿಗಿಯ ಬಣವಿಕಲ್ಲು ಗ್ರಾಮದ ಬಳಿ ಇಂದು ನಡೆದಿದೆ. ಕೂಡ್ಲಿಗಿ ಮಾರ್ಗವಾಗಿ ಎನ್.ಹೆಚ್ 50ರಲ್ಲಿ ಬೆಂಗಳೂರಿಗೆ ತೆರಳುತ್ತಿದ್ದ ಈ ಲಾರಿ ಚಾಲಕನ ನಿಯಂತ್ರಣ ತಪ್ಪಿ ಪಲ್ಟಿಯಾಗಿದೆ. ಹೆದ್ದಾರಿಯಲ್ಲಿ ಅಡುಗೆ ಎಣ್ಣೆ ಸಂಗ್ರಹಿಸಲು ಜನ ಮುಗಿಬಿದ್ದರು. ಎಣ್ಣೆ ರಸ್ತೆಗೆ ಸೋರಿಕೆಯಾಗುತ್ತಿದ್ದಂತೆ ಸ್ಥಳೀಯರು ಕ್ಯಾನ್, ಕೊಡಗಳನ್ನು ಹಿಡಿದುಕೊಂಡು ಘಟನಾ ಸ್ಥಳಕ್ಕೆ ಧಾವಿಸಿದರು. ತಮಗೆ ಸಿಕ್ಕಷ್ಟು ಎಣ್ಣೆ ತುಂಬಿಕೊಂಡು ಹೋಗುತ್ತಿದ್ದ ದೃಶ್ಯ ಸಾಮಾನ್ಯವಾಗಿತ್ತು.
ಚಾಲಕ, ಕ್ಲೀನರ್ ಪಾರು: ಲಾರಿ ಚಾಲಕ ಹಾಗೂ ಕ್ಲೀನರ್ ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಅಪಾರ ಪ್ರಾಮಾಣ ಅಡುಗೆ ಎಣ್ಣೆ ರಸ್ತೆಯಲ್ಲಿ ಹರಿದು ಹೋಗಿದೆ. ಘಟನಾ ಸ್ಥಳಕ್ಕೆ ಕಾನಾಹೊಸಹಳ್ಳಿ ಪೊಲೀಸರು ಭೇಟಿ ನೀಡಿದರು. ಸ್ಥಳದಲ್ಲಿ ಜಮಾಯಿಸಿದ್ದ ಜನರನ್ನು ಚದುರಿಸಲು ಪೊಲೀಸರು ಹರಸಾಹಸಪಟ್ಟರು.
ಮೆಕ್ಕೆ ಜೋಳ ಬಣವಿಗೆ ಬೆಂಕಿ: ಮೆಕ್ಕೆಜೋಳ ಬಣವಿಗೆ ಕಿಡಿಗೇಡಿಗಳು ಬೆಂಕಿ ಇಟ್ಟಿದ್ದು, 3 ಲಕ್ಷ ರೂ.ಗೂ ಅಧಿಕ ಬೆಳೆ ನಷ್ಟವಾದ ಘಟನೆ ತಾಲೂಕಿನ ಮರಿಯಮ್ಮನಹಳ್ಳಿ ಬಳಿಯ ಡಣಾಯಕನಕೆರೆ ಗ್ರಾಮದಲ್ಲಿ ನಡೆದಿದೆ. ಫಕ್ರುಸಾಬ್ ಎಂಬ ರೈತನಿಗೆ ಸೇರಿದ ಮೆಕ್ಕೆಜೋಳ ಬೆಳೆ ತೆನೆ ಮುರಿದು ಒಂದೆಡೆ ಕೂಡಿಹಾಕಲಾಗಿತ್ತು.
ಡಣಾಯಕನಕೆರೆ ಗ್ರಾಮದ ಫಕ್ರುಸಾಬ್ ಎಂಟು ಎಕರೆ ಭೂಮಿಯನ್ನು ಗುತ್ತಿಗೆ ಆಧಾರದಲ್ಲಿ ಜಹಾಂಗೀರ್ ಎಂಬ ರೈತನಿಂದ ಪಡೆದು ಕೃಷಿ ಮಾಡುತ್ತಿದ್ದರು. ಮುಂಗಾರಿಗೆ ಬೆಳೆದ ಮೆಕ್ಕೆಜೋಳ ತೆನೆ ಮುರಿದು ಒಂದೆಡೆ ಬಣವಿಗೆ ಹಾಕಲಾಗಿತ್ತು. ಭಾನುವಾರ ಯಂತ್ರಕ್ಕೆ ಹಾಕಬೇಕಿತ್ತು. ಬೆಳಗ್ಗಿನ ಜಾವ ಯಾರೂ ಇಲ್ಲದ ವೇಳೆ ಕಿಡಿಗೇಡಿಗಳು ಬೆಂಕಿ ಹಚ್ಚಿದ್ದಾರೆ. ಕಷ್ಟಪಟ್ಟು ಬೆಳೆದಿದ್ದ ಬೆಳೆ ಬೆಂಕಿಗಾಹುತಿಯಾಗಿದೆ. ಪಕ್ರುಸಾಬ್ ಅವರ ಕುಟುಂಬ ಕಣ್ಣೀರಿಡುತ್ತಾ ಮಾಧ್ಯಮವದವರೆದುರು ನೋವು ತೋಡಿಕೊಂಡರು.
ಮರಿಯಮ್ಮನಹಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಇದನ್ನೂ ಓದಿ: ಟ್ರಕ್ಗೆ ಹಿಂಬದಿಯಿಂದ ಟೆಂಪೋ ಟ್ರಾವೆಲರ್ ಡಿಕ್ಕಿ.. 12 ಮಂದಿ ಭಕ್ತರ ದುರ್ಮರಣ, 20 ಜನರಿಗೆ ಗಾಯ