ಹೊಸಪೇಟೆ: ಮುಂದಿನ ಸಾರ್ವತ್ರಿಕ ಚುನಾವಣೆಯಲ್ಲಿ ವಿಜಯನಗರ ಕ್ಷೇತ್ರದಲ್ಲಿ ಕಾಂಗ್ರೆಸ್ ಗೆದ್ದೇ ಗೆಲ್ಲುತ್ತದೆ. ಹಣ ಬಲ ಇರುವವರಿಗೆ ಜನರು ಮತದಾನ ಮಾಡುವುದಿಲ್ಲ. ಈ ಬಾರಿಯ ಉಪ ಚುನಾವಣೆಯಲ್ಲಿ ಕಾಂಗ್ರೆಸ್ ಕಡಿಮೆ ಮತದ ಅಂತರದಿಂದ ಸೋತಿದೆ ಎಂದು ಕಾಂಗ್ರೆಸ್ನ ಹಿರಿಯ ಮುಖಂಡ ಹಾಗೂ ಕೆಪಿಸಿಸಿ ಮಾಜಿ ಉಪಾಧ್ಯಕ್ಷ ಸೂರ್ಯನಾರಾಯಣ ರೆಡ್ಡಿ ಸಮರ್ಥನೆ ಮಾಡಿಕೊಂಡರು.
ನಗರದ ಪಿಬಿಎಸ್ ಹೋಟೆಲ್ನಲ್ಲಿ ಕಾಂಗ್ರೆಸ್ ಕಾರ್ಯಕರ್ತರ ಸಭೆ ಬಳಿಕ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಬಿಜೆಪಿ ಅಭ್ಯರ್ಥಿ ಆನಂದ ದುಡ್ಡಿನಿಂದ ಗೆಲುವನ್ನು ಕಂಡುಕೊಂಡಿದ್ದಾರೆ. ಮತದಾರರಿಗೆ ಹಣವನ್ನು ನೀಡಿದ್ದಾರೆ. ಬಿಜೆಪಿ ಸರ್ಕಾರ ಸುಭದ್ರವಾಗಿಲ್ಲ. ಅದು ತುಂಬಾ ದಿನ ಉಳಿಯುವುದಿಲ್ಲ ಎಂದು ಭವಿಷ್ಯ ನುಡಿದರು.
ಪಕ್ಷದಲ್ಲಿ ಈಗಾಗಲೇ ಬಿರುಕು ಉಂಟಾಗಿದೆ. ಜನರ ಕಣ್ಣಿಗೆ ಸುಭದ್ರ ಸರ್ಕಾರ ಅಂತಾ ಹೇಳುತ್ತಿದ್ದಾರೆ. ಸಚಿವ ಬಿ.ಶ್ರೀರಾಮುಲು ಅವರಿಗೆ ಉಪ ಮುಖ್ಯಮಂತ್ರಿಯನ್ನಾಗಿ ಮಾಡುತ್ತೇವೆ ಎಂದು ಭರವಸೆ ನೀಡಿದ್ದರು. ಆದರೆ, ಶ್ರೀರಾಮುಲು ಪಕ್ಷದಿಂದ ಅಂತರ ಕಾಯ್ದುಕೊಳ್ಳುತ್ತಿದ್ದಾರೆ. ಸರ್ಕಾರದಲ್ಲಿ ಮುಸುಕಿನ ಗುದ್ದಾಟ ನಡೆಯುತ್ತಿದೆ ಎಂದರು.