ಬಳ್ಳಾರಿ: ಜಿಲ್ಲೆಯ ಹಗರಿಬೊಮ್ಮನಹಳ್ಳಿಯ ಪುರಸಭೆ ಅಧ್ಯಕ್ಷ ಹಾಗೂ ಉಪಾಧ್ಯಕ್ಷರ ಆಯ್ಕೆಗೆ ಚುನಾವಣೆ ನಡೆಯುತ್ತಿದ್ದು, ನಾಮಪತ್ರ ಸಲ್ಲಿಕೆ ವೇಳೆ ಕಾಂಗ್ರೆಸ್-ಬಿಜೆಪಿ ಕಾರ್ಯಕರ್ತರ ಮಧ್ಯೆ ನೂಕಾಟ ಮತ್ತು ತಳ್ಳಾಟ ನಡೆಯಿತು.
ಹಗರಿಬೊಮ್ಮನಹಳ್ಳಿಯ ಹಾಲಿ ಶಾಸಕ ಭೀಮಾ ನಾಯ್ಕ ಅವರು ತಮ್ಮ ಬೆಂಬಲಿಗರೊಂದಿಗೆ ಏಕಾಏಕಿ ಪುರಸಭೆ ಕಾರ್ಯಾಲಯಕ್ಕೆ ಕಾರಿನಲ್ಲಿ ಬಂದಿಳಿದಿದ್ದರು. ಅದರಿಂದ ಕುಪಿತಗೊಂಡ ಬಿಜೆಪಿಯ ಕಾರ್ಯಕರ್ತರು ಶಾಸಕ ಭೀಮಾ ನಾಯ್ಕ ಸೇರಿದಂತೆ ಕಾಂಗ್ರೆಸ್ ಕಾರ್ಯಕರ್ತರೊಂದಿಗೆ ವಾಗ್ವಾದಕ್ಕಿಳಿದರು. ಚುನಾವಣೆ ಪ್ರಕ್ರಿಯೆ ನಡೆಯುತ್ತಿರೋವಾಗ ಅದ್ಹೇಗೆ ಒಳಗಡೆ ಪ್ರವೇಶಿಸಿದ್ರಿ ಅಂತ ಪ್ರಶ್ನಿಸಿದರು.
ಆಗ ಶಾಸಕ ಭೀಮಾ ನಾಯ್ಕ ಅವರ ಬಳಿಯೇ ನಿಂತಿದ್ದ ಬಿಜೆಪಿ ಎಸ್ಟಿ ಮೋರ್ಚಾ ತಾಲೂಕು ಘಟಕದ ಅಧ್ಯಕ್ಷ ಗರಗದ ಪ್ರಕಾಶ ಎಂಬಾತನಿಗೆ ಗುಂಪಿನ ಮಧ್ಯೆ ಯಾರೋ ಒಬ್ಬರು ಹಲ್ಲೆ ನಡೆಸಿದರು. ಪರಿಣಾಮ ಕೆಲಕಾಲ ಸ್ಥಳದಲ್ಲಿ ಉದ್ವಿಗ್ನ ವಾತಾವರಣ ನಿರ್ಮಾಣವಾಗಿತ್ತು. ವಿಷಯ ತಿಳಿದ ಡಿವೈಎಸ್ಪಿ ರಘು ಘಟನಾ ಸ್ಥಳಕ್ಕೆ ಆಗಮಿಸಿ ಪರಿಸ್ಥಿತಿಯನ್ನು ತಿಳಿಗೊಳಿಸಿದ್ದಾರೆ.
ಶಾಸಕರಿಂದಲೇ ಹಲ್ಲೆ ಆರೋಪ:
ಶಾಸಕ ಭೀಮಾ ನಾಯ್ಕ ಅವರಿಂದಲೇ ನಮ್ಮ ಕಾರ್ಯಕರ್ತರ ಮೇಲೆ ಹಲ್ಲೆ ನಡೆದಿದೆ ಎಂದು ಆರೋಪಿಸಿ ಕೆಲಕಾಲ ಪುರಸಭೆ ಕಚೇರಿ ಎದುರು ಬಿಜೆಪಿ ಮಾಜಿ ಶಾಸಕ ನೇಮಿರಾಜ ನಾಯ್ಕ ಮತ್ತು ಕಾರ್ಯಕರ್ತರು ಚುನಾವಣೆ ಪ್ರಕ್ರಿಯೆ ಬಹಿಷ್ಕರಿಸಿ ಪ್ರತಿಭಟನೆ ನಡೆಸಿದ್ರು.