ಬಳ್ಳಾರಿ: ಒಡಹುಟ್ಟಿದ ಅಂಧ ಸಹೋದರರಿಬ್ಬರು ಮನೆಯಲ್ಲಿಯೇ ಶಾಸ್ತ್ರೀಯ ಸಂಗೀತ, ಭಾವಗೀತೆ, ಭಜನೆಗಳನ್ನು ಹಾಡುವ ಮೂಲಕ ಜನರಿಗೆ ಸಾಮಾಜಿಕ ಮಾಧ್ಯಮಗಳಾದ ಫೇಸ್ಬುಕ್, ವಾಟ್ಸಾಪ್, ಯೂಟ್ಯೂಬ್ ಮೂಲಕ ಜಾಗೃತಿ ಮೂಡಿಸುವ ಕೆಲಸವನ್ನು ಮಾಡುತ್ತಿದ್ದಾರೆ.
ಜಿಲ್ಲೆಯ ಸಿರುಗುಪ್ಪ ತಾಲೂಕಿನ ರಾವಿಹಾಳ್ ಗ್ರಾಮದ ಹುಚ್ಚಯ್ಯ ಹಿರೇಮಠ ಮತ್ತು ವೀರೇಶ್ ಹಿರೇಮಠ ಇಬ್ಬರು ಅಂಧ ಸಹೋದರರು. ಇವರು ಶಾಸ್ತ್ರಿಯ ಸಂಗೀತ, ತಬಲ, ಹಾರ್ಮೋನಿಯಂ ಕಲಾವಿದರು.
'ಈಟಿವಿ ಭಾರತ'ದೊಂದಿಗೆ ದೂರವಾಣಿ ಮೂಲಕ ಮಾತನಾಡಿದ ವಿರೇಶ್ ಹಿರೇಮಠ ಅವರು, ನಾವಿಬ್ಬರು ಗದುಗಿನ ಪುಟ್ಟರಾಜ ಗವಾಯಿಗಳ ಆಶ್ರಮದಲ್ಲಿ ಸಂಗೀತ, ತಬಲ ಮತ್ತು ಹಾರ್ಮೋನಿಯಂ ವಿದ್ಯಾಭ್ಯಾಸ ಮಾಡಿದ್ದೇವೆ. ಕೊರೊನಾ ವೈರಸ್ನಿಂದಾಗಿ ಮನೆಯಲ್ಲಿಯೇ ಇದ್ದೇವೆ. ಕಳೆದ ಐದಾರು ತಿಂಗಳಿಂದ ಯಾವುದೇ ಪುರಾಣ, ಪ್ರವಚನ, ಕನ್ನಡ ಮತ್ತು ಸಂಸ್ಕೃತಿ ಕಾರ್ಯಕ್ರಮಗಳು ಇಲ್ಲದೆ ಮನೆಯಲ್ಲಿಯೇ ಕಾಲಕಳೆಯುವ ಪರಿಸ್ಥಿತಿ ಉಂಟಾಗಿದೆ ಎಂದರು.
ಕೊರೊನಾ ಸಮಯದಲ್ಲಿ ಯಾವುದೇ ಸಂಪಾದನೆ ಇಲ್ಲ, ಸರ್ಕಾರ ನೀಡುವ ಸಹಾಯಧನ ಸಾಕಾಗುವುದಿಲ್ಲ. ತಂದೆ- ತಾಯಿ ಅಂಗಡಿ ಇಟ್ಟಿದ್ದಾರೆ. ಅದರಿಂದ ನಮ್ಮ ಜೀವನ ನಡೆಯುತ್ತಿದೆ ಎಂದು ತಿಳಿಸಿದರು.