ಬಳ್ಳಾರಿ: ಕಂಪ್ಲಿ ಪುರಸಭೆ ಸದಸ್ಯ ಎನ್.ರಾಮಾಂಜನೇಯಲು ಸತತ ಮೂರು ಬಾರಿ ಗೆಲುವು ಸಾಧಿಸಿದ ಹಿನ್ನೆಲೆ 12ನೇ ವಾರ್ಡಿನ ಬಿಜೆಪಿ ಕಾರ್ಯಕರ್ತರು ಅವರ ತಲೆ ಮೇಲೆ ಅಂದಾಜು 15 ಲೀಟರ್ ಹಾಲಿನಿಂದ ಕ್ಷೀರಾಭಿಷೇಕ ಮಾಡಿ ಸಂಭ್ರಮಿಸಿದ್ದಾರೆ.
ಕಂಪ್ಲಿ ಪುರಸಭೆ ವ್ಯಾಪ್ತಿಯ 12 ನೇ ವಾರ್ಡಿನಲ್ಲಿ 2007 - 2013ರಲ್ಲಿ ನಡೆದ ಚುನಾವಣೆಯಲಿ ಸತತ ಎರಡು ಬಾರಿ ಬಿಜೆಪಿ ಬೆಂಬಲಿತ ಅಭ್ಯರ್ಥಿ ಎನ್.ರಾಮಾಂಜನೇಯಲು ಗೆಲುವು ಸಾಧಿಸಿದ್ದರು. ಹನ್ನೆರಡನೇ ವಾರ್ಡಿನ ಮೀಸಲಾತಿ ಬಂದ ಹಿನ್ನಲೆಯಲ್ಲಿ 20ನೇ ವಾರ್ಡಿನಿಂದ 2019ರಲ್ಲಿ ಸ್ಪರ್ಧಿಸಿದ್ರು. ಹೊಸದಾದ ವಾರ್ಡಿನಲ್ಲೂ ಕೂಡ ಗೆಲುವು ಸಾಧಿಸಿ ಹ್ಯಾಟ್ರಿಕ್ ಸಾಧನೆ ಮಾಡಿದ್ದಾರೆ ಎಂದು ಬಿಜೆಪಿ ಮುಖಂಡ ಡಾ.ವೆಂಕಟೇಶ ತಿಳಿಸಿದ್ದಾರೆ. ಹೀಗಾಗಿ, ಅವರ ಗೆಲುವನ್ನು ಕ್ಷೀರಾಭಿಷೇಕ ಮಾಡೋ ಮುಖೇನ ವಿಶೇಷವಾಗಿ ಸಂಭ್ರಮಿಸಲಾಗಿದೆ. ಬಳಿಕ ಅಪಾರ ಅಭಿಮಾನಿಗಳೊಂದಿಗೆ ಅಭಯ ಆಂಜನೇಯಸ್ವಾಮಿ ದೇಗುಲದಲ್ಲಿ ವಿಶೇಷ ಅಭಿಷೇಕ ಮಾಡಿಸಿ, 108 ತೆಂಗಿನಕಾಯಿ ಸಮರ್ಪಿಸಿದ್ರು.
ಹಾಲಿ ಪುರಸಭೆ ಸದಸ್ಯ ಎನ್.ರಾಮಾಂಜನೇಯಲು ಮಾತನಾಡಿ, ನನ್ನ ಎರಡು ಅವಧಿಗೆ 12ನೇ ವಾರ್ಡಿನ ಮತದಾರರು ಆಶೀರ್ವದಿಸಿದ್ದರು. ಇದೀಗ 20ನೇ ವಾರ್ಡಿನ ಮತದಾರರೂ ಕೂಡ ನನಗೆ ಆಶೀರ್ವಾದ ಮಾಡಿದ್ದಾರೆ. ಮುಂದಿನ ದಿನ ಈ ವಾರ್ಡಿನ ಅಭಿವೃದ್ಧಿಗೆ ಶ್ರಮಿಸುವೆ ಎಂದು ಅವರು ಭರವಸೆ ನೀಡಿದರು.
ಮುಖಂಡರಾದ ಸಿ.ಭರಮಕ್ಕನವರ, ಡಿ.ಶ್ರೀಧರ ಶ್ರೇಷ್ಠಿ, ಎಚ್.ಶ್ರೀನಿವಾಸ, ಜೆ.ಶಿವಕುಮಾರ, ಸಣ್ಣ ಹುಲುಗಪ್ಪ, ರಮೇಶ, ಬಾಷಾ, ವಡ್ಡರ ರಮೇಶ, ರಂಗಸ್ವಾಮಿ, ನಾಗರಾಜ, ಯಲ್ಲಪ್ಪ, ರುದ್ರೇಶ, ಗಾದಿಲಿಂಗ ಈ ವೇಳೆ ಹಾಜರಿದ್ರು.