ಬಳ್ಳಾರಿ: ರಾಜ್ಯ ಬಿಜೆಪಿ ಎಸ್‌ಟಿ ಮೋರ್ಚಾ ವತಿಯಿಂದ ಇಂದು ಬೆಳಗ್ಗೆ 10 ಗಂಟೆಗೆ ಗಣಿನಾಡಿನಲ್ಲಿ ಬೃಹತ್ ನವಶಕ್ತಿ ಸಮಾವೇಶ ನಡೆಯಲಿದೆ. ಬಿಜೆಪಿಯ ಪ್ರಭಾವಿ ನಾಯಕರು ಕಾರ್ಯಕ್ರಮಕ್ಕೆ ಆಗಮಿಸಲಿದ್ದಾರೆ. ನಗರದ ಟ್ರಾಮಾ ಕೇರ್ ಸೆಂಟರ್ ಬಳಿಯಿರುವ ಖಾಸಗಿ ಬಡಾವಣೆಯ ಜಾಗದಲ್ಲಿ ಸಕಲ ಸಿದ್ಧತೆ ನಡೆದಿದೆ.
ಬಿಜೆಪಿ ಹಿರಿಯ ಮುಖಂಡರ ಆಗಮನ: ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ.ನಡ್ಡಾ, ಕರ್ನಾಟಕ ಉಸ್ತುವಾರಿ ಅರುಣ್ ಸಿಂಗ್, ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ, ಮಾಜಿ ಮುಖ್ಯಮಂತ್ರಿ ಹಾಗೂ ಕೇಂದ್ರೀಯ ಸಂಸದೀಯ ಮಂಡಳಿ ಸದಸ್ಯ ಬಿ.ಎಸ್.ಯಡಿಯೂರಪ್ಪ, ರಾಜ್ಯದ ಸಾರಿಗೆ ಮತ್ತು ಪರಿಶಿಷ್ಟ ಪಂಗಡ ಕಲ್ಯಾಣ ಖಾತೆ ಸಚಿವ ಬಿ. ಶ್ರೀರಾಮುಲು, ಬಿಜೆಪಿ ರಾಜ್ಯ ಪ್ರಧಾನ ಕಾರ್ಯದರ್ಶಿ ಸಿದ್ದರಾಜು, ಬಳ್ಳಾರಿ ಜಿಲ್ಲಾಧ್ಯಕ್ಷ ಮುರಹರಗೌಡ ಸೇರಿದಂತೆ ಮತ್ತಿತರರು ಭಾಗವಹಿಸಲಿದ್ದಾರೆ. ಅಲ್ಲದೇ ರಾಜ್ಯ ಎಸ್‌ಟಿ ಮೋರ್ಚಾದ ಅಧ್ಯಕ್ಷರು, ಪದಾಧಿಕಾರಿಗಳು ಹಾಗೂ ಎಸ್ಸಿ ಎಸ್ಟಿ ಮೀಸಲು ಕ್ಷೇತ್ರದ ಬಿಜೆಪಿ ಶಾಸಕರು, ಸಚಿವರು ಸಮಾವೇಶದಲ್ಲಿ ಪಾಲ್ಗೊಳ್ಳಲಿದ್ದಾರೆ.
ಕೊಪ್ಪಳ, ರಾಯಚೂರು, ಚಿತ್ರದುರ್ಗ, ಬಳ್ಳಾರಿ ಸುತ್ತಲಿನ ಪ್ರದೇಶಗಳಿಂದ ಹೆಚ್ಚು ಜನರು ಆಗಮಿಸುವ ನಿರೀಕ್ಷೆ ಇದೆ. ವಿವಿಧ ಜಿಲ್ಲೆಗಳಿಂದ ಅಂದಾಜು 10 ಲಕ್ಷಕ್ಕೂ ಹೆಚ್ಚು ಬಿಜೆಪಿ ಕಾರ್ಯಕರ್ತರು ಹಾಜರಾಗಬಹುದೆಂದು ಹೇಳಲಾಗುತ್ತಿದೆ.
130 ಎಕರೆ ಪ್ರದೇಶ ಬಳಕೆ: ಸಮಾವೇಶಕ್ಕಾಗಿ ಸುಮಾರು 130 ಎಕರೆ ಪ್ರದೇಶ ಬಳಕೆ ಮಾಡಲಾಗಿದೆ. 20*40 ಅಡಿಗಳ ನಡುವೆ ಎರಡು ಮುಖ್ಯ ವೇದಿಕೆ ನಿರ್ಮಾಣವಾಗಿದೆ. 40 ಬೈ 60 ಅಡಿಯ ಅತಿ ಗಣ್ಯರ ವೇದಿಕೆ ಇದೆ. 3,20,000 ಚದರಡಿ ಪೆಂಡಾಲ್ ವ್ಯವಸ್ಥೆ ಇದ್ದು ಸಾಂಸ್ಕೃತಿಕ ಕಾರ್ಯಕ್ರಮಗಳಿಗೆ ವಿಶೇಷ ವೇದಿಕೆ ಸಿದ್ಧಗೊಂಡಿದೆ.
300ಕ್ಕೂ ಹೆಚ್ಚು ಊಟದ ಕೌಂಟರ್: ಸುಮಾರು 1,00,00 ಚದರಡಿ ಜಾಗವನ್ನು ಅಡುಗೆ ತಯಾರಿಸಲು ಬಳಸಲಾಗುತ್ತಿದೆ. ಬೆಳಗ್ಗೆ 10 ಗಂಟೆಯಿಂದ ಸಂಜೆ 4 ಗಂಟೆವರೆಗೆ ನಿರಂತರ ಊಟದ ವ್ಯವಸ್ಥೆ ಇರಲಿದೆ. ಸುಮಾರು 300ಕ್ಕೂ ಹೆಚ್ಚು ಊಟದ ಕೌಂಟರ್‌ಗಳನ್ನು ತೆರೆಯಲಾಗಿದೆ.
ಬೃಹತ್ ಕಾಲ್ನಡಿಗೆ ಜಾಥಾ: ಸಮಾವೇಶದ ಯಶಸ್ಸಿಗೆ ಸುಮಾರು 41 ಸಮಿತಿಗಳಲ್ಲಿ 3,000ಕ್ಕೂ ಹೆಚ್ಚು ಕಾರ್ಯಕರ್ತರನ್ನು ನೇಮಿಸಿದ್ದು, 8,000 ರಿಂದ 10,000 ಬಸ್‌ಗಳು, 20,000 ಕ್ರೂಸರ್, 10,000 ಕಾರು, 25,000 ಬೈಕ್‌ಗಳು ಆಗಮಿಸಲಿದೆ. 10,000 ಮಹಿಳಾ ಕಾರ್ಯಕರ್ತರಿಂದ ಬಳ್ಳಾರಿ ನಗರದಿಂದ ಸಮಾವೇಶಕ್ಕೆ ಬೃಹತ್ ಕಾಲ್ನಡಿಗೆ ಜಾಥಾ ನಡೆಸಲಾಗುತ್ತದೆ. ಎರಡು ಹೆಲಿಕಾಪ್ಟರ್ ವ್ಯವಸ್ಥೆ ಮಾಡಲಾಗಿದೆ. ವಿಮ್ಸ್ ನೇತೃತ್ವದಲ್ಲಿ ಆರೋಗ್ಯ ಸಮಸ್ಯೆ ಎದುರಿಸಲು ವೈದ್ಯಕೀಯ ವ್ಯವಸ್ಥೆ ಕೂಡ ಇಡುತ್ತದೆ ಎಂದು ಬಿಜೆಪಿ ಪಕ್ಷದ ಮೂಲಗಳು ತಿಳಿಸಿವೆ.
ಇದನ್ನೂ ಓದಿ:'ಭೂತದ ಬಾಯಲ್ಲಿ ಭಗವದ್ಗೀತೆ': ಕಾಂಗ್ರೆಸ್ ವಿರುದ್ಧ ಸಿಎಂ ಬೊಮ್ಮಾಯಿ ವಾಗ್ದಾಳಿ