ವಿಜಯನಗರ: ವಿಶ್ವವಿಖ್ಯಾತ ಹಂಪಿಗೆ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ.ನಡ್ಡಾ ಕುಟುಂಬಸಮೇತ ಭೇಟಿ ನೀಡಿದರು. ವಿಜಯನಗರ ಸಾಮ್ರಾಜ್ಯದ ಆರಾಧ್ಯದೈವ ವಿರುಪಾಕ್ಷನ ದರ್ಶನದೊಂದಿಗೆ ಆರಂಭವಾದ ಭೇಟಿ ವಿಜಯ ವಿಠಲ ದೇವಸ್ಥಾನದಲ್ಲಿ ಸಮಾರೋಪಗೊಂಡಿತು. ಇಲ್ಲಿನ ಸ್ಮಾರಕಗಳನ್ನು ಕಣ್ತುಂಬಿಕೊಂಡ ಅವರು ಅಪರೂಪದ ಶಿಲ್ಪವೈಭವಕ್ಕೆ ಮಾರು ಹೋದರು.
ಬೆಳಗ್ಗೆ ವಿರುಪಾಕ್ಷನ ದರ್ಶನ ಪಡೆದು ನಡ್ಡಾ ಕುಟುಂಬ ವಿದ್ಯಾರಣ್ಯಭಾರತಿ ಶ್ರೀಗಳೊಂದಿಗೆ ಚರ್ಚೆ ನಡೆಸಿದರು. ಹೊಸ 50 ರೂಪಾಯಿ ನೋಟಿನಲ್ಲಿರುವ ಹಂಪಿಯ ಕಲ್ಲಿನ ರಥದ ಚಿತ್ರವನ್ನು ಹಿಡಿದು ಫೋಟೋ ತೆಗೆಸಿಕೊಂಡರು. ದೇವಸ್ಥಾನಕ್ಕೆ ಆಗಮಿಸಿದಾಗ ಆನೆ ಲಕ್ಷ್ಮೀ ಹೂಮಾಲೆ ಹಾಕಿ ಆಶೀರ್ವದಿಸಿತು. ದೇವಸ್ಥಾನ ವೀಕ್ಷಿಸಿದ ನಂತರ ರೈಲು ಮಾದರಿಯ ಬಸ್ನಲ್ಲಿ ಹಂಪಿಯ ಸ್ಮಾರಕಗಳ ವೀಕ್ಷಣೆಗೆ ತೆರಳಿದರು.
ಬಳಿಕ ಮಾತನಾಡಿದ ನಡ್ಡಾ, ಹಂಪಿ ಪುಣ್ಯ ಭೂಮಿ. ಈ ಪುಣ್ಯ ಭೂಮಿಯನ್ನು ನಾವು ಕುಟುಂಬಸಮೇತವಾಗಿ ವೀಕ್ಷಣೆ ಮಾಡಿದ್ದೇವೆ. ಇದು ನಮ್ಮ ಪುಣ್ಯ. ಹಂಪಿಯನ್ನು ಕೇವಲ ವೀಕ್ಷಣೆ ಮಾಡುವುದಲ್ಲ, ಬದಲಾಗಿ ಇಲ್ಲಿನ ಇತಿಹಾಸ ತಿಳಿದುಕೊಳ್ಳಬೇಕು. ಹಂಪಿ ನಿರ್ಮಾಣ ಮಾಡಲು ಅನೇಕ ಸಾಧು ಸಂತರ ಪರಿಶ್ರಮ ಇದೆ. ಪರಕೀಯರ ದಾಳಿಯಿಂದ ನಮ್ಮ ಸಂಸ್ಕೃತಿ ಹಾಳಾಗಿದ್ದು, ಅದನ್ನು ಮರುನಿರ್ಮಾಣ ಮಾಡುವ ಕೆಲಸ ನಡೆಯುತ್ತಿದೆ. ಹಂಪಿ ಕೇಂದ್ರ ಸರ್ಕಾದ ಪುರಾತತ್ವ ಇಲಾಖೆಯ ಅಧೀನದಲ್ಲಿದೆ. ಇಲ್ಲಿನ ಅಭಿವೃದ್ಧಿಗೆ ಬೇಕಾದ ಅಗತ್ಯ ಕ್ರಮಗಳನ್ನು ಸರ್ಕಾರ ತೆಗೆದುಕೊಳ್ಳಲಿದೆ. ಮತ್ತೆ ನಾನು ಇಲ್ಲಿಗೆ ಬರುವೆ ಎಂದು ಹರ್ಷ ವ್ಯಕ್ತಪಡಿಸಿದರು.
ಇದನ್ನೂ ಓದಿ: ಶರದ್ ಪವಾರ್ ಭೇಟಿ ಮಾಡಿ ಚರ್ಚಿಸಿದ ಡಿಕೆಶಿ ; ಚುನಾವಣಾ ಪೂರ್ವ ಮೈತ್ರಿ ಚರ್ಚೆ!?