ಬಳ್ಳಾರಿ: ಕೊರೊನಾ ಚಿಕಿತ್ಸೆಗಾಗಿ ಜಿಲ್ಲೆಯ ವಿಮ್ಸ್ ಸರ್ಕಾರಿ ದಂತ ಮಹಾವಿದ್ಯಾಲಯಕ್ಕೆ ಕಳೆದ 8 ದಿನಗಳ ಹಿಂದೆ ದಾಖಲಾಗಿರುವ ಕಂಪ್ಲಿ ಪುರಸಭೆಯ ಸದಸ್ಯ ಚಾಂದ್ಪಾಶಾ ಅವರು, ಸೋಂಕಿತರಿಗೆ ಯೋಗಾಸನ ಹೇಳಿಕೊಡುವುದರ ಜೊತೆಗೆ ಆತ್ಮಸ್ಥೈರ್ಯ ತುಂಬುತ್ತಿದ್ದಾರೆ
ಸೋಂಕು ಹೊಡೆದೋಡಿಸಲು ಆತ್ಮಸ್ಥೈರ್ಯವೇ ಮುಖ್ಯ. ನೊಂದುಕೊಂಡು ಕೊರೊನಾ ಚಿಕಿತ್ಸೆಗೆ ಬರಬೇಡಿ. ಇದೊಂದು ಪಿಕ್‍ನಿಕ್ ಎಂದುಕೊಂಡು ಬನ್ನಿ. ಏನು ಆಗಲ್ಲ, ಬಿ ಹ್ಯಾಪಿ ಎಂದು ಹೊಸದಾಗಿ ಬರುವ ಸೋಂಕಿತರಿಗೆ ಮತ್ತು ಊಟ-ನೀರು ಸೇವಿಸದೇ ಮುಂದೇನು ನಮ್ಮಗತಿ ಎಂದು ಚಿಂತಿಸುವವರ ಎದುರು ಚಾಂದ್ಪಾಶಾ ಭರವಸೆಯ ಮಾತುಗಳನ್ನಾಡುತ್ತಿದ್ದಾರೆ.
ಇದರ ಜೊತೆಗೆ ತಮ್ಮದೇ ಖರ್ಚಿನಲ್ಲಿ ಕಷಾಯಕ್ಕೆ ಸಂಬಂಧಿಸಿದ ಸಾಮಗ್ರಿಗಳನ್ನು ಖರೀದಿಸಿ, ತಮ್ಮ ಕೈಯಾರೆ ಪ್ರತಿನಿತ್ಯ ಕಷಾಯ ಸಿದ್ಧಪಡಿಸಿ 50 ಜನರಿಗೆ ಕುಡಿಸುತ್ತಿದ್ದಾರೆ.
ನಿಜಕ್ಕೂ ಈ ವ್ಯಕ್ತಿ ನಮಗೆಲ್ಲೆರಿಗೂ ಸ್ಫೂರ್ತಿ ಎಂದು ವಿಮ್ಸ್ ಸರ್ಕಾರಿ ದಂತ ಮಹಾವಿದ್ಯಾಲಯದ ಕೋವಿಡ್ ನೋಡಲ್ ಅಧಿಕಾರಿ ಡಾ. ರಾಘವೇಂದ್ರ ಅವರು ಹೇಳುತ್ತಾರೆ.
ಚಾಂದ್ಪಾಶಾ ಅವರು ವಿವಿಧ ಯೋಗಾಸನದ ಭಂಗಿಗಳ ವಿಡಿಯೋ ಗಮನಿಸಿದೆ ಹಾಗೂ ಅವರಾಡುವ ಸ್ಫೂರ್ತಿದಾಯಕ ಮಾತುಗಳನ್ನ ಆಲಿಸಿದೆ. ಇದರಿಂದ ತುಂಬಾ ಸಂತೋಷವಾಯ್ತು ಎಂದು ಬಳ್ಳಾರಿ ಜಿಲ್ಲಾಧಿಕಾರಿ ಎಸ್.ಎಸ್. ನಕುಲ್ ಮೆಚ್ಚುಗೆ ವ್ಯಕ್ತಪಡಿಸಿದರು.