ಬಳ್ಳಾರಿ: ಜಿಲ್ಲೆಯಲ್ಲಿ ಅತ್ಯುತ್ತಮ ತಂಡದ ಜತೆಗೆ ಕೆಲಸ ನಿರ್ವಹಿಸಿದ ಹೆಮ್ಮೆ ನನಗೆ ಇದೆ. ಇಲ್ಲಿ ಮಾಡಿದ ಕೆಲಸಗಳು ಹಾಗೂ ಸಲ್ಲಿಸಿದ ಸೇವೆಯನ್ನು ಸದಾ ಸ್ಮರಿಸುವುದಾಗಿ ನಿರ್ಗಮಿತ ಜಿಲ್ಲಾಧಿಕಾರಿ ಎಸ್.ಎಸ್.ನಕುಲ್ ಹೇಳಿದರು.
ಜಿಲ್ಲಾಡಳಿತ ಮತ್ತು ಜಿಲ್ಲೆಯ ಸಾರ್ವಜನಿಕರಿಂದ ನಗರದ ಬಿಡಿಎಎ ಫುಟ್ಬಾಲ್ ಸಭಾಂಗಣದಲ್ಲಿ ಏರ್ಪಡಿಸಿದ್ದ ಜಿಲ್ಲಾಧಿಕಾರಿ ಎಸ್.ಎಸ್.ನಕುಲ್ ಅವರಿಗೆ ಬೀಳ್ಕೊಡುಗೆ ಸಮಾರಂಭ ಮತ್ತು ಜಿಲ್ಲೆಗೆ ನೂತನವಾಗಿ ಆಗಮಿಸಿದ ಜಿಲ್ಲಾಧಿಕಾರಿ ಪವನ್ ಕುಮಾರ ಮಾಲಪಾಟಿ ಅವರ ಸ್ವಾಗತ ಸಮಾರಂಭದಲ್ಲಿ ಸನ್ಮಾನ ಸ್ವೀಕರಿಸಿ ಮಾತನಾಡಿದ ಅವರು, ನನ್ನ ಸುಪುತ್ರ ಬಳ್ಳಾರಿ ಜಿಲ್ಲಾಸ್ಪತ್ರೆಯಲ್ಲಿ ಹುಟ್ಟಿದ್ದಾನೆ. ಇಲ್ಲಿ ಸಲ್ಲಿಸಿದ ಸೇವೆಯನ್ನು ಸದಾ ಸ್ಮರಿಸುವುದಾಗಿ ಹೇಳಿದರು.
ಆಹಾರ ಕಿಟ್ ಹಾಗೂ ಧಾನ್ಯಗಳ ಸರಬರಾಜು ವಿಷಯದಲ್ಲಿ ತೋರಿದ ಗಮನಾರ್ಹತೆಯನ್ನು ಬೆಂಗಳೂರಿನ ಇಂಡಿಯನ್ ಇನ್ಸ್ಟಿಟ್ಯೂಟ್ ಆಫ್ ಮ್ಯಾನೇಜ್‍ಮೆಂಟ್ ಗುರುತಿಸಿದ್ದು, ಇದೇ ಮಾದರಿಯನ್ನು ಬೇರೆಡೆ ಅನುಸರಿಸುವಂತೆ ಸೂಚಿಸಿರುವುದು ನಮ್ಮ ಜಿಲ್ಲೆಯ ಹೆಮ್ಮೆಯ ಸಂಗತಿ ಎಂದರು.
ತಾವು ಜಿಲ್ಲಾಧಿಕಾರಿಗಳಾಗಿದ್ದ ಸಂದರ್ಭದಲ್ಲಿ ಜಾರಿಗೆ ತಂದಿದ್ದ ವಿವಿಧ ಯೋಜನೆಗಳನ್ನು ಇದೇ ಸಂದರ್ಭದಲ್ಲಿ ನೆನಪಿಸಿಕೊಂಡ ನಿರ್ಗಮಿತ ಜಿಲ್ಲಾಧಿಕಾರಿ ನಕುಲ್, ಕೊರೊನಾ ಮಹಾಮಾರಿ ಜನರನ್ನು ಕಾಡತೊಡಗಿದಾಗ ಆರೋಗ್ಯ ಇಲಾಖೆ, ವೈದ್ಯಕೀಯ ಶಿಕ್ಷಣ ಇಲಾಖೆ ಅತ್ಯುತ್ತಮವಾಗಿ ಕೆಲಸ ಮಾಡಿವೆ ಎಂದರು.
ಸನ್ಮಾನ ಸ್ವೀಕರಿಸಿದ ನೂತನ ಜಿಲ್ಲಾಧಿಕಾರಿ ಪವನ್ ಕುಮಾರ ಮಾಲಪಾಟಿ ಮಾತನಾಡಿ, ಬಳ್ಳಾರಿ ಜಿಲ್ಲೆಯಲ್ಲಿ ಎಲ್ಲವನ್ನು ಅತ್ಯುತ್ತಮವಾಗಿ ನಿರ್ವಹಿಸಿಕೊಂಡು ಹೋಗಿದ್ದ ಖ್ಯಾತಿ ಎಸ್.ಎಸ್.ನಕುಲ್ ಅವರದ್ದಾಗಿದೆ. ಇಡೀ ದೇಶದಲ್ಲಿರುವ ಕೆಲವೇ ಕೆಲವು ಮಾದರಿ ಅಧಿಕಾರಿಗಳಲ್ಲಿ ಅವರು ಒಬ್ಬರು ಎಂದರು.