ಬಳ್ಳಾರಿ: ಜಿಲ್ಲೆಯಿಂದ 1452 ಜನ ಹಾಗೂ ಹೊಸಪೇಟೆ ರೈಲು ನಿಲ್ದಾಣದಿಂದ 1452 ವಲಸೆ ಕಾರ್ಮಿಕರನ್ನು ಹೊತ್ತ ಶ್ರಮಿಕ್ ವಿಶೇಷ ರೈಲು ಉತ್ತರಪ್ರದೇಶದತ್ತ ಭಾನುವಾರ ಬೆಳಗ್ಗೆ ತೆರಳಿತು.
ಜಿಲ್ಲೆಯ ರೈಲ್ವೆ ನಿಲ್ದಾಣದಿಂದ ಜಿಲ್ಲಾಧಿಕಾರಿ ಎಸ್.ಎಸ್. ನಕುಲ್, ಎಸ್ಪಿ ಸಿ.ಕೆ. ಬಾಬಾ, ಜಿಪಂ ಸಿಇಒ ಕೆ. ನಿತೀಶ್, ಪ್ರೋಬೆಷನರಿ ಐಎಎಸ್ ಈಶ್ವರ್ ಕಾಂಡೂ, ಸಹಾಯಕ ಆಯುಕ್ತ ರಮೇಶ ಕೋನರೆಡ್ಡಿ ಸೇರಿದಂತೆ ಅನೇಕರು ಹಾಗೂ ಹೊಸಪೇಟೆ ರೈಲ್ವೆ ನಿಲ್ದಾಣದಲ್ಲಿ ಸಹಾಯಕ ಆಯುಕ್ತ ಶೇಖ್ ತನ್ವೀರ್ ಅಸೀಫ್, ತಹಶೀಲ್ದಾರ್ ವಿಶ್ವನಾಥ ಅವರು ಸುರಕ್ಷಿತವಾಗಿ ತಮ್ಮೂರನ್ನು ತಲುಪಿ ಮತ್ತೆ ಜಿಲ್ಲೆಗೆ ಅತ್ಯಂತ ಖುಷಿಯಿಂದ ಬನ್ನಿ ಎಂದು ಶುಭ ಹಾರೈಸಿ ಚಪ್ಪಾಳೆ ತಟ್ಟಿ ಬೀಳ್ಕೊಟ್ಟರು.

ಮುಂಚಿತವಾಗಿ ವೈದ್ಯಕೀಯ ತಪಾಸಣೆ ನಡೆಸಿ ಪ್ರಮಾಣಪತ್ರ ವಿತರಣೆ...
ಬಳ್ಳಾರಿ, ತೋರಣಗಲ್ಲು ಸೇರಿದಂತೆ ಜಿಲ್ಲೆಯ ವಿವಿಧೆಡೆ ಜೀವನ ನಿರ್ವಹಣೆಗೆ ಬಂದಿದ್ದ ಉತ್ತರಪ್ರದೇಶದ 2904 ಜನ ವಲಸಿಗರನ್ನು ಜಿಲ್ಲೆಯ ಕೇಂದ್ರ ಬಸ್ ನಿಲ್ದಾಣದಲ್ಲಿ ಹಾಗೂ ತೋರಣಗಲ್ಲು ಸರ್ಕಾರಿ ಮಾದರಿ ಹಿರಿಯ ಪ್ರಾಥಮಿಕ ಮತ್ತು ಪ್ರೌಢಶಾಲೆಯಲ್ಲಿ ಶುಕ್ರವಾರ ಮತ್ತು ಶನಿವಾರ ವೈದ್ಯಕೀಯ ತಪಾಸಣೆ ನಡೆಸಿ ಅವರಿಗೆ ಪ್ರಮಾಣಪತ್ರ ವಿತರಿಸಿ ಹಾಗೂ ಅಲ್ಲಿಯೇ 835 ರೂ.ಗಳ ಟಿಕೆಟ್‍ನ್ನು ಇವರಿಗೆ ನೀಡಲಾಗಿತ್ತು.
ಆ ವಲಸಿಗರನ್ನು ಅವರಿಗೆ ನೀಡಲಾದ ಟಿಕೆಟ್ ಹಿಂಬದಿಯಲ್ಲಿ ಬರೆಯಲಾದ ಸೀಟ್ ಸಂಖ್ಯೆ ಮತ್ತು ಬೋಗಿ ನೋಡಿಕೊಂಡು ಪೊಲೀಸ್ ಸಿಬ್ಬಂದಿ ಹಾಗೂ ಜಿಲ್ಲಾಡಳಿತದ ಸಿಬ್ಬಂದಿ ಸಂಬಂಧಿಸಿದ ಬೋಗಿಯಲ್ಲಿ ಕುಳಿತುಕೊಳ್ಳುವಂತೆ ಬೆಳಗ್ಗೆ 7ರಿಂದಲೇ ತಿಳಿಸುತ್ತಿದ್ದರು.

ಆಹಾರ ಸಾಮಗ್ರಿಗಳ ಕಿಟ್ ವಿತರಣೆ...
ಪ್ರಯಾಣದ ಸಂದರ್ಭದಲ್ಲಿ ಕಾರ್ಮಿಕರು ಹಸಿವಿನಿಂದ ಬಳಲಬಾರದು ಎಂಬ ಸದುದ್ದೇಶದಿಂದ ಎರಡು ಬಿಸ್ಕಟ್ ಪ್ಯಾಕೇಟ್, ಎರಡು ಬ್ರೇಡ್ ಪ್ಯಾಕ್, ಮೂರು ಲೀಟರ್ ನೀರು, ಎರಡು ಪ್ಯಾಕೇಟ್ ಆಹಾರ ಪೊಟ್ಟಣ, ಮಿರ್ಚಿ-ಬಜ್ಜಿ ಹಾಗೂ ಇನ್ನಿತರ ಆಹಾರ ಸಾಮಗ್ರಿಗಳ ಕಿಟ್‍ಗಳನ್ನು ಪ್ರತಿಯೊಬ್ಬರಿಗೂ ಜಿಲ್ಲಾಡಳಿತದ ವತಿಯಿಂದ ನೀಡಲಾಯಿತು.
ಸ್ಯಾನಿಟೈಸರ್, ಮಾಸ್ಕ್ ವಿತರಣೆ...
ರೈಲ್ವೆ ನಿಲ್ದಾಣದೊಳಗೆ ಆಗಮಿಸುತ್ತಲೇ ವಲಸಿಗ ಪ್ರಯಾಣಿಕರಿಗೆ ಸ್ಯಾನಿಟೈಸರ್ ಕೈಗೆ ಸಿಂಪಡಿಸಲಾಗುತ್ತಿತ್ತು. ರೆಡ್‍ಕ್ರಾಸ್ ಸಂಸ್ಥೆಯವರು ಇದೇ ಸಂದರ್ಭದಲ್ಲಿ ಮಾಸ್ಕ್ಗಳನ್ನು ವಿತರಿಸಿದರು.ಉತ್ತರಪ್ರದೇಶದ ಆಗ್ರಾ,ಅಲಿಘರ್,ಅಜಂಘರ್, ಲಕ್ನೋ, ಅಲಹಾಬಾದ್, ಅಮೇಥಿ ಸೇರಿದಂತೆ ವಿವಿಧ ಜಿಲ್ಲೆಗಳಿಗೆ ತೆರಳಲು ರೈಲಿನ ಸೀಟಿನಲ್ಲಿ ಆಸೀನರಾಗಿದ್ದ ವಲಸಿಗರು ತಮ್ಮೂರು ಕಡೆ ಸುರಕ್ಷಿತವಾಗಿ ಪಯಣಿಸುತ್ತಿರುವುದಕ್ಕೆ ಸಂತಸ ವ್ಯಕ್ತಪಡಿಸುತ್ತಿರುವುದು ಕಂಡುಬಂತು.
ಜಿಲ್ಲಾಧಿಕಾರಿ ಎಸ್.ಎಸ್.ನಕುಲ್,ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಸಿ.ಕೆ.ಬಾಬಾ, ಅಪರ ಪೊಲೀಸ್ ವರಿಷ್ಠಾಧಿಕಾರಿ ಬಿ.ಎನ್.ಲಾವಣ್ಯ ಅವರು ಜಿಲ್ಲೆಯ ರೈಲ್ವೆ ನಿಲ್ದಾಣದಲ್ಲಿನ ಎಲ್ಲಾ ಸಿದ್ಧತೆಗಳನ್ನು ಪರಿಶೀಲಿಸಿದರು. ಹೊಸಪೇಟೆಯಲ್ಲಿ ಸಹಾಯಕ ಆಯುಕ್ತ ಶೇಖ್ ತನ್ವೀರ್ ಅಸೀಫ್ ಹಾಗೂ ತಹಸೀಲ್ದಾರ್ ವಿಶ್ವನಾಥ ಅವರು ಬೆಳಗ್ಗೆಯಿಂದಲೇ ಖುದ್ದು ಸ್ಥಳದಲ್ಲಿ ಉಪಸ್ಥಿತರಿದ್ದು, ವಲಸಿಗರನ್ನು ಅತ್ಯಂತ ಸುರಕ್ಷಿತವಾಗಿ ಕಳುಹಿಸಿಕೊಟ್ಟರು.