ಬಳ್ಳಾರಿ: ಫೆಬ್ರವರಿ 4, 5 ಮತ್ತು 6 ರಂದು ವೀರಶೈವ ವಿದ್ಯಾವರ್ಧಕ ಸಂಘದಿಂದ ಸಾಂಸ್ಕೃತಿಕ ಉತ್ಸವ 2020, ಮೂರು ದಿನಗಳ ಕಾಲ ನಡೆಯುತ್ತದೆ ಎಂದು ವೀರಶೈವ ವಿದ್ಯಾವರ್ಧಕ ಸಂಘದ ಕಾರ್ಯದರ್ಶಿ ಚೋರನೂರು ಟಿ.ಕೊಟ್ರಪ್ಪ ತಿಳಿಸಿದರು.
ನಗರದ ವೀರಶೈವ ವಿದ್ಯಾವರ್ಧಕ ಸಂಘದಿಂದ ಸುದ್ದಿಗಾರರೊಂದಿಗೆ ಮಾತನಾಡಿದ ವೀ.ವಿ. ಸಂಘದ ಕಾರ್ಯದರ್ಶಿ ಚೋರನೂರು ಟಿ. ಕೊಟ್ರಪ್ಪ, ವಿದ್ಯಾರ್ಥಿಗಳಿಗೆ ಕಲೆ ಕುರಿತ ಜಾಗೃತಿಗಾಗಿ ಹಾಗೆ ಕಲೆಗೆ ಪ್ರೋತ್ಸಾಹ ನೀಡುವ ಕೆಲಸವನ್ನು ಕಳೆದ ಎರಡು ವರ್ಷದಿಂದ ಈ ಸಾಂಸ್ಕೃತಿಕ ಉತ್ಸವದ ಮೂಲಕ ಮಾಡುತ್ತಿದ್ದೇವೆ ಎಂದು ತಿಳಿಸಿದರು. 4ನೇ ತಾರೀಖು ಕಲಾ ತಂಡಗಳೊಂದಿಗೆ ಸಂಘದ ವಿವಿಧ ವಿದ್ಯಾಸಂಸ್ಥೆ ವಿದ್ಯಾರ್ಥಿ, ವಿದ್ಯಾರ್ಥಿನಿಯರು ಭಾಗವಹಿಸಲಿದ್ದು, ಶೆಟ್ರ ಗುರುಶಾಂತಪ್ಪ ಸಂಯುಕ್ತ ಪದವಿಪೂರ್ವ ಕಾಲೇಜ್ ಆವರಣದಲ್ಲಿ ಕಾರ್ಯಕ್ರಮ ಜರುಗಲಿದೆಯೆಂದರು.
ನಂತರ ಮಾತನಾಡಿದ ವೀರಶೈವ ವಿದ್ಯಾವರ್ಧಕ ಸಂಘದ ಅಧ್ಯಕ್ಷ ಉಡೇದ್ ಬಸವರಾಜ್, ಗ್ರಾಮೀಣ ಪ್ರದೇಶದ ಮಕ್ಕಳಿಗೆ ಕಲೆಗಳ ಬಗ್ಗೆ ಅವಕಾಶವನ್ನು ಕಲ್ಪಿಸುವ ಕೆಲಸವನ್ನು ಮಾಡುತ್ತಿದ್ದೇವೆ. ಹಾಗೆಯೇ ಕಲೆಯ ಜೊತೆಗೆ ಕವನವಾಚನ, ಪ್ರಬಂಧ ಸ್ಪರ್ಧೆ, ಭಾಷಣದ ಸ್ಪರ್ಧೆ, ಕರಕುಶಲ ಪ್ರದರ್ಶನ ವಿಭಿನ್ನ ಕಾರ್ಯಕ್ರಮಗಳನ್ನು ಹಮ್ಮಿಕೊಂಡಿದ್ದೇವೆ. ಮೆರವಣಿಗೆಯಲ್ಲಿ ಮೂರು ಸಾವಿರ ವಿದ್ಯಾರ್ಥಿಗಳು ಭಾಗವಹಿಸುತ್ತಾರೆ. ಪ್ರಸ್ತುತ ವಿದ್ಯಾಭ್ಯಾಸ ಮಾಡುತ್ತಿರುವ 42 ವಿ.ವಿ ಸಂಘದ ವಿದ್ಯಾಸಂಸ್ಥೆಗಳ ನೂರಾರು ವಿದ್ಯಾರ್ಥಿಗಳು ಭಾಗವಹಿಸುತ್ತಿದ್ದಾರೆ ಎಂದು ಮಾಹಿತಿ ನೀಡಿದರು.