ಬಳ್ಳಾರಿ: ಗಣಿನಾಡು ಬಳ್ಳಾರಿ ಜಿಲ್ಲೆಯಲ್ಲೀಗ ಹತ್ತು ಕೋವಿಡ್ ಕೇರ್ ಸೆಂಟರ್ಗಳು ಕಾರ್ಯಾರಂಭ ಮಾಡಿವೆ. ಪ್ರತಿದಿನ ಸರಿ ಸುಮಾರು 350ರಿಂದ 500 ಮಂದಿ ನೇರವಾಗಿ ಕೊರೊನಾ ವಾರಿಯರ್ಸ್ ಆಗಿ ಸೇವೆ ಸಲ್ಲಿಸುತ್ತಿದ್ದಾರೆ.
ಕೊರೊನಾ ಸೋಂಕಿಗೆ ಒಳಪಟ್ಟ ಸೋಂಕಿತರು ಕೋವಿಡ್ ಕೇರ್ ಸೆಂಟರ್ಗೆ ಬಂದ ಆರಂಭದಲ್ಲಿ ತುಂಬಾ ಭಯದಲ್ಲಿರುತ್ತಾರೆ. ಆ ಬಳಿಕ ಕೋವಿಡ್ ಕೇರ್ ಸೆಂಟರ್ನ ವೈದ್ಯರು, ಸಿಬ್ಬಂದಿ ಆತ್ಮಸ್ಥೈರ್ಯ ತುಂಬಿದ ನಂತರ ಕೊಂಚ ಮಟ್ಟಿಗೆ ನಿರಾಳಾಗುತ್ತಾರೆ.
ಆದ್ರೂ ಇಡೀ ದಿನ ಭಯದಲ್ಲೇ ಇರುತ್ತಾರೆ. ಎರಡನೇಯ ದಿನಕ್ಕೆ ಮಾನಸಿಕವಾಗಿ ಚೇತರಿಸಿಕೊಂಡು ಸೋಂಕಿತರೊಂದಿಗೆ ಬೆರೆತುಕೊಂಡು ಕೊರೊನಾ ಸೋಂಕಿಗೆ ಒಳಗಾಗಿರೋದನ್ನೇ ಮರೆತುಬಿಡುತ್ತಾರೆಂಬ ಅಭಿಪ್ರಾಯ ಕೋವಿಡ್ ಕೇರ್ ಸೆಂಟರ್ನ ಸಿಬ್ಬಂದಿಯದ್ದಾಗಿದೆ. ಅಷ್ಟೊಂದು ಶ್ರಮಪಟ್ಟು ಹಗಲಿರುಳು ಶ್ರಮಿಸಿ, ಕೊರೊನಾ ಸೋಂಕಿತರಲ್ಲಿನ ಭಯವನ್ನ ಹೋಗಲಾಡಿಸಲು ಕೊರೊನಾ ವಾರಿಯರ್ಸ್ ಶ್ರಮಿಸುತ್ತಿರೋದು ನಿಜಕ್ಕೂ ಶ್ಲಾಘನಾರ್ಹ.
ಗಣಿ ಜಿಲ್ಲೆಯಲ್ಲೀಗ ಹತ್ತು ಕೋವಿಡ್ ಕೇರ್ ಸೆಂಟರ್:
ಗಣಿನಾಡು ಬಳ್ಳಾರಿ ಜಿಲ್ಲೆಯ ಜಿಲ್ಲಾ ಸರ್ಕಾರಿ ಆಸ್ಪತ್ರೆ ಹಾಗೂ ಬಳ್ಳಾರಿಯ ವಿಜಯನಗರ ವೈದ್ಯಕೀಯ ವಿಜ್ಞಾನ ಸಂಸ್ಥೆಯ (ವಿಮ್ಸ್) ಆಸ್ಪತ್ರೆ ಸೇರಿದಂತೆ ಆಯಾ ತಾಲೂಕಿನ ಸರ್ಕಾರಿ ಆರೋಗ್ಯ ಕೇಂದ್ರಗಳನ್ನು ಕೋವಿಡ್ ಕೇರ್ ಸೆಂಟರ್ಗಳನ್ನಾಗಿ ಮಾಡಲಾಗಿದೆ ಎಂದು ಡಿಹೆಚ್ಒ ಡಾ. ಹೆಚ್.ಎಲ್.ಜನಾರ್ದನ ಈಟಿವಿ ಭಾರತಕ್ಕೆ ಮಾಹಿತಿ ನೀಡಿದರು.
ವೈದ್ಯರು, ಸ್ಟಾಫ್ ನರ್ಸ್ ಸೇರಿದಂತೆ ಇನ್ನಿತರ ಸಿಬ್ಬಂದಿ ಕೋವಿಡ್ ಕೇರ್ ಸೆಂಟರ್ಗಳಲ್ಲಿ ಸೇವೆ ಸಲ್ಲಿಸಿದ್ರೆ, ಆಶಾ ಕಾರ್ಯಕರ್ತೆಯರು, ಹೆಲ್ತ್ ವರ್ಕರ್ಸ್ ಸೇರಿದಂತೆ ಇನ್ನಿತರೆ ಸಿಬ್ಬಂದಿ ಕೂಡ ಸಮುದಾಯದೊಳಗೆ ಕಾರ್ಯನಿರ್ವಹಿಸುತ್ತಿದ್ದಾರೆ.
ಆರೋಗ್ಯ ಇಲಾಖೆಯ ಪ್ರತಿಯೊಬ್ಬರೂ ಕೂಡ ಕೊರೊನಾ ವಾರಿಯರ್ಸ್ ಆಗಿ ಸೇವೆ ಸಲ್ಲಿಸುತ್ತಿರೋದು ನಿಜಕ್ಕೂ ಶ್ಲಾಘನಾರ್ಹ. ಹೀಗಾಗಿ ಪ್ರತಿ ತಿಂಗಳು ಅಂದಾಜು 1500 - 2000 ಮಂದಿ ಕೊರೊನಾ ವಾರಿಯರ್ಸ್ ಆಗಿ ಸೇವೆ ಸಲ್ಲಿಸುತ್ತಿದ್ದಾರೆ ಎಂದು ಡಾ. ಜನಾರ್ದನ ಹೇಳಿದರು.
ಕೊರೊನಾ ಸೋಂಕಿಗೆ ಒಳಗಾಗಿ ಗುಣಮುಖರಾದ ಕಂಪ್ಲಿಯ ಪುರಸಭೆ ಸದಸ್ಯ ಚಾಂದ ಪಾಷ ಮಾತನಾಡಿ, ನಾನು ಬಳ್ಳಾರಿಯ ಡೆಂಟಲ್ ಕಾಲೇಜಿನ ಕೋವಿಡ್ ಕೇರ್ ಸೆಂಟರ್ಗೆ ಮೊದಲ ದಿನ ಭೇಟಿಯಾದಾಗ ಭಯಪಟ್ಟಿದ್ದೆ. ಇಡೀ ದಿನವೂ ನನ್ನನ್ನು ಆ ಭಯ ಆವರಿಸಿತ್ತು. ಆದರೆ ಕೋವಿಡ್ ಕೇರ್ ಸೆಂಟರ್ನ ಕೊರೊನಾ ವಾರಿಯರ್ಗಳ ಆರೈಕೆಯಿಂದ ಬೇಗನೆ ಗುಣಮುಖನಾದೆ. ನಾನು ಕೋವಿಡ್ ಕೇರ್ ಸೆಂಟರ್ನಲ್ಲಿದ್ದಾಗ ಓರ್ವ ವೃದ್ಧನ ಆರೋಗ್ಯದಲ್ಲಿ ಏರುಪೇರಾಗಿತ್ತು. ವೈದ್ಯರು ತುರ್ತು ಚಿಕಿತ್ಸೆ ನೀಡಿದ್ದರಿಂದಲೇ ಆತ ಬದುಕುಳಿದ ಎಂದು ಚಾಂದ ಪಾಷ ತಮ್ಮ ಅನುಭವ ಹಂಚಿಕೊಂಡರು.
ಹೆಚ್ಚಾದ ಕೊರೊನಾ ಸೋಂಕಿತರ ಸಂಖ್ಯೆ:
ಗಣಿನಾಡು ಬಳ್ಳಾರಿ ಜಿಲ್ಲೆಯಲ್ಲಿ ದಿನದಿಂದ ದಿನಕ್ಕೆ ಕೊರೊನಾ ಸೋಂಕಿತರ ಪ್ರಮಾಣ ಹೆಚ್ಚಾಗುತ್ತಿದೆ. ಪ್ರತಿ ದಿನವೂ ಪತ್ತೆಯಾಗುತ್ತಿರುವ ಹೊಸ ಪ್ರಕರಣಗಳ ಸಂಖ್ಯೆ ನೂರರ ಗಡಿ ದಾಟುತ್ತಿದೆ.
ಈವರೆಗೂ 2945 ಪ್ರಕರಣಗಳು ದೃಢಪಟ್ಟಿದ್ದು, ಸುಮಾರು 1436 ಮಂದಿ ಗುಣಮುಖರಾಗಿದ್ದಾರೆ. 1447 ಸಕ್ರಿಯ ಪ್ರಕರಣಗಳಿವೆ. ಈವರೆಗೂ ಜಿಲ್ಲೆಯಲ್ಲಿ 62 ಮಂದಿ ಸಾವನ್ನಪ್ಪಿದ್ದಾರೆ.