ಬಳ್ಳಾರಿ: ಜಿಲ್ಲೆಯ ಹೊಸಪೇಟೆ ತಾಲೂಕಿನಾದ್ಯಂತ ಲೈಂಗಿಕ ದೌರ್ಜನ್ಯ ಹೆಚ್ಚಾಗಿ ಕಂಡುಬಂದಿದ್ದು, ಬಹುತೇಕ ಪ್ರಕರಣಗಳಲ್ಲಿ ಆರೋಪಿಗಳಿಗೆ ಶಿಕ್ಷೆಯಾಗಿದೆ ಎಂದು ಹೊಸಪೇಟೆ ತಾಲೂಕು ಮಕ್ಕಳ ಸಹಾಯವಾಣಿ ಉಪಕೇಂದ್ರದ ಸಂಯೋಜಕ ಜಿ.ಚಿದಾನಂದ ತಿಳಿಸಿದ್ದಾರೆ.
ಬಳ್ಳಾರಿಯ ಪತ್ರಿಕಾ ಭವನದಲ್ಲಿಂದು ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಹೊಸಪೇಟೆ ತಾಲೂಕಿನಲ್ಲಿ ಸುಮಾರು 18 ಲೈಂಗಿಕ ದೌರ್ಜನ್ಯ ಪ್ರಕರಣಗಳು ದಾಖಲಾಗಿವೆ. ಆ ಪೈಕಿ 15 ಪ್ರಕರಣಗಳಲ್ಲಿ ಎಫ್ಐಆರ್ ದಾಖಲಾಗಿದೆ. 12 ಮಂದಿ ಆರೋಪಿತರಿಗೆ ಶಿಕ್ಷೆಯಾಗಿದೆ ಎಂದರು.
ಬಿಡಿಡಿಎಸ್ ಸಹಯೋಗ ಸಂಸ್ಥೆಯ ಮುಖ್ಯಸ್ಥ ಪುಷ್ಪರಾಜ ಅವರು ಮಾತನಾಡಿ, ಬಾಲ್ಯ ವಿವಾಹ ತಡೆಗೆ ಪೊಲೀಸ್ ಇಲಾಖೆಯಿಂದ ಸಕಾರಾತ್ಮಕ ಸ್ಪಂದನೆ ದೊರೆತಿದೆ. ಹಿಂದಿನ ವರ್ಷ ಪೊಲೀಸ್ ಇಲಾಖೆಯ ಸಿಬ್ಬಂದಿಯಿಂದ ಅಷ್ಟೊಂದು ಪ್ರತಿಕ್ರಿಯೆ ವ್ಯಕ್ತವಾಗಿರಲಿಲ್ಲ. ಆ ಕುರಿತು ಜಿಲ್ಲಾ ಪೊಲೀಸ್ ಇಲಾಖೆ ವರಿಷ್ಠಾಧಿಕಾರಿ ಅವರ ಗಮನಕ್ಕೆ ತಂದಿರುವೆ. ಇದೀಗ ಸುಧಾರಣೆಯಾಗಿದೆ ಎಂದರು.
2019ರ ಏಪ್ರಿಲ್ ತಿಂಗಳಿಂದ ಅಕ್ಟೋಬರ್ವರೆಗೆ ಮಕ್ಕಳ ಸಹಾಯವಾಣಿ ಕೇಂದ್ರಕ್ಕೆ ಅಂದಾಜು 783 ಕರೆಗಳು ಬಂದಿವೆ. ವೈದ್ಯಕೀಯ 27, 103 ಬಾಲ ಕಾರ್ಮಿಕರು, ಮಕ್ಕಳ ಕಳ್ಳ ಸಾಗಣೆ 2, ದೈಹಿಕ ದೌರ್ಜನ್ಯ 16, ದೈಹಿಕ ಶಿಕ್ಷೆ 2, 157 ಬಾಲ್ಯ ವಿವಾಹ ಪ್ರಕರಣಗಳು ಬೆಳಕಿಗೆ ಬಂದಿವೆ ಎಂದರು.
ಇನ್ನು ಕಾರ್ಯಕ್ರಮದಲ್ಲಿ ಬಿಡಿಡಿಎಸ್ ಸಂಸ್ಥೆ ನಿರ್ದೇಶಕ ಯಾದಪ್ಪ, ಕೂಡ್ಲಿಗಿ ತಾಲೂಕು ಮಕ್ಕಳ ಸಹಾಯವಾಣಿ ಕೇಂದ್ರದ ಸಂಯೋಜಕ ಡಿ.ರುದ್ರಪ್ಪ, ಜಿಲ್ಲಾ ಸಂಯೋಜಕ ಮಂಜುನಾಥ ಇದ್ದರು.