ಬಳ್ಳಾರಿ: ಕೊರೊನಾ ವೈರಸ್ ಸೋಂಕು ಜನತೆಗೆ ತಾಗಬಾರದು ಎಂಬ ಉದ್ದೇಶದಿಂದ ಇಂದಿನಿಂದ (ಮಂಗಳವಾರ) ಮಾರ್ಚ್ 31ರ ತನಕ ನಿಷೇಧಾಜ್ಞೆ ಜಾರಿಗೆ ತರಲಾಗುತ್ತಿದ್ದು, ಆದೇಶ ಉಲ್ಲಘಿಸಿದರೆ ಕಠಿಣ ಶಿಕ್ಷೆ ನೀಡಲಾಗುವುದು ಎಂದು ಜಿಲ್ಲಾಡಳಿತ ಎಚ್ಚರಿಕೆಯ ಸಂದೇಶ ನೀಡಿದೆ.
ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಜಿಲ್ಲಾಧಿಕಾರಿ ಎಸ್.ಎಸ್. ನಕುಲ್ ಅವರು, ಆಹಾರ ಸಾಮಗ್ರಿ, ಕಿರಾಣಿ ಅಂಗಡಿ, ಹಾಲು, ತರಕಾರಿ, ಮಾಂಸ, ಮೀನು ಹಾಗೂ ಹಣ್ಣಿನ ಮಾರುಕಟ್ಟೆ ಹೊರತುಪಡಿಸಿ ಉಳಿದ ಯಾವುದೇ ಅಂಗಡಿಗಳು ತೆರೆಯುವಂತಿಲ್ಲ. ಇಂದಿನಿಂದ (ಮಂಗಳವಾರ ) ಮಾರ್ಚ್ 31ರ ಮಧ್ಯ ರಾತ್ರಿವರೆಗೂ ನಿಷೇಧಾಜ್ಞೆ ಜಾರಿಯಲ್ಲಿರುತ್ತದೆ. ಈ ನಿಯಮ ಉಲ್ಲಂಘಿಸಿದ ತಪ್ಪಿತಸ್ಥರ ವಿರುದ್ಧ ಕಾನೂನು ಕ್ರಮ ಜರುಗಿಸಲಾಗುವುದು ಎಂದು ಎಚ್ಚರಿಸಿದರು.
ಅಗತ್ಯ ಸರಕು ಸಾಗಿಸುವ ವಾಹನಗಳು, ಅಗ್ನಿಶಾಮಕ ದಳ, ಸರ್ಕಾರಿ ಕಚೇರಿ, ಸ್ಥಳೀಯ ಸಂಸ್ಥೆಗಳು, ಗ್ರಾಮ ಪಂಚಾಯಿತಿ, ಅಂಚೆ ಕಚೇರಿ, ವಿದ್ಯುತ್, ಗ್ಯಾಸ್ ಸಿಲಿಂಡರ್ ಏಜೆನ್ಸಿ, ಪೆಟ್ರೋಲ್ ಬಂಕ್, ಜಲ ಮಂಡಳಿ, ಬ್ಯಾಂಕ್, ಎಟಿಎಂ ಹಾಗೂ ದೂರವಾಣಿ, ಎಪಿಎಂಸಿ, ಇಂದಿರಾ ಕ್ಯಾಂಟೀನ್, ಭತ್ತ ಖರೀದಿ ಕೇಂದ್ರ ಸೇರಿದಂತೆ ಇನ್ನಿತರೆ ಕೆಲ ಆಯ್ದ ವಲಯಗಳಿಗೆ ವಿನಾಯಿತಿ ನೀಡಲಾಗಿದೆ ಎಂದರು.