ಹೊಸಪೇಟೆ :ಆನಂದ್ ಸಿಂಗ್ ಕ್ಷೇತ್ರದ ಜನರಿಗೆ ಅನ್ಯಾಯ ಮಾಡಿದ್ದಾರೆ ಅವರನ್ನು ಕಾಂಗ್ರೆಸ್ ಪಕ್ಷದಿಂದ ಆಯ್ಕೆ ಮಾಡಿದ ಜನರಿಗೆ ವಂಚನೆ ಮಾಡಿದ್ದಾರೆ. ಬಿಜೆಪಿ ಪಕ್ಷದ ಉಳಿವಿಗಾಗಿ ರಾಜೀನಾಮೆ ನೀಡಿದ್ದಾರೆ, ಹೊರತು ವಿಜಯನಗರ ಜನತೆಯ ಹಿತವನ್ನು ಕಾಪಾಡುವುದಕ್ಕಲ್ಲ. ರಾಜೀನಾಮೆಯನ್ನು ನೀಡಿದವರೆಲ್ಲ ಮತದಾರ ಬಳಿ ಮತ ಕೇಳಲು ಅಯೋಗ್ಯರು ಎಂದು ಮಾಜಿ ಸಚಿವ ಬಸವರಾಜ ರಾಯರೆಡ್ಡಿ ಕಿಡಿಕಾರಿದರು.
ನಗರ ಸಭೆ ಕಾರ್ಯಾಲಯದ ಮುಂಭಾಗದಲ್ಲಿರುವ ಚರ್ಚ್ ಸಭಾಂಗಣದಲ್ಲಿ ಸಂಜೆ ನಡೆದ ಕಾಂಗ್ರೆಸ್ ಕಾರ್ಯಕರ್ತರ ಸಭೆಯಲ್ಲಿ ಮಾಜಿ ಸಚಿವ ಬಸವರಾಜ ರಾಯರಡ್ಡಿ ಅವರು ಮಾತನಾಡಿ, ಕಾಂಗ್ರೆಸ್ ಪಕ್ಷದ ಅಭ್ಯರ್ಥಿ ವೆಂಕಟರಾವ್ ಘೋರ್ಪಡೆ ಅವರು ಸ್ಥಳೀಯರಲ್ಲ ಎಂದು ಹೇಳುವುದು ಸರಿ ಅಲ್ಲ. ಆನಂದ ಸಿಂಗ್ ಅವರು ಸ್ಥಳೀಯ ವ್ಯಕ್ತಿನಾ? ಎನ್ನುವುದನ್ನು ತಿಳಿದುಕೊಳ್ಳಬೇಕು, ಎಂದು ಕಾರ್ಯಕರ್ತರಿಗೆ ಸತ್ಯಾಂಶವನ್ನು ಹೇಳಿದರು.
ಬಿಜೆಪಿ ಪಕ್ಷದ ಆಸೆ ಆಮಿಷಗಳಿಗೆ ಬಲಿಯಾಗಿ ಸರಕಾರವನ್ನು ಬೀಳಿಸುವ ಕುತಂತ್ರದಿಂದ ಬಿಜೆಪಿಗೆ ಸೇರಿದ್ದಾರೆ. ಮತ್ತೆ ಚುನಾವಣೆಯಲ್ಲಿ ಸ್ಪರ್ಧೆ ಮಾಡಲು ಅವರು ಯೋಗ್ಯರಲ್ಲ ಎಂದರು. ಇಂತಹ ಅಯೋಗ್ಯ ಅಭ್ಯರ್ಥಿಗಳಿಗೆ ಮತದಾರರು ಈ ಉಪಚುನಾವಣೆಯಲ್ಲಿ ತಕ್ಕ ಪಾಠವನ್ನು ಕಲಿಸಬೇಕಿದೆ ಎಂದರು.
ಅನರ್ಹರು ಎಂದರೆ ಅಯೋಗ್ಯರು ಅವರು ಕೆಲಸಕ್ಕೆ ಬಾರದವರು ಎಂದರ್ಥ. ಮುಖ್ಯಮಂತ್ರಿ ಬಿ.ಎಸ್ ಯಡಿಯೂರಪ್ಪ ಇವರಿಗೆಲ್ಲ ಭವಿಷ್ಯದ ಸಚಿವರು ಎಂದು ಹೇಳಿದ್ದಾರೆ ಮತ್ತು ಆರೋಗ್ಯ ಸಚಿವ ಬಿ.ಶ್ರೀ ರಾಮುಲು ಸಚಿವರಾದ 24 ಗಂಟೆಗಳಲ್ಲಿ ಆನಂದ ಸಿಂಗ್ ಸಚಿವರಾಗುತ್ತಾರೆ ಎಂದು ಹೇಳುತ್ತಾರೆ. ಬಿಜೆಪಿ ಪಕ್ಷದವರಿಗೆ ನಾಚಿಕೆಯಾಗಬೇಕು ಎಂದು ಮಾತಿನ ಚಾಟಿ ಬೀಸಿದರು.