ಬಳ್ಳಾರಿ: ಭ್ರಷ್ಟರ ಭೇಟೆಗೆ ಬಲೆ ಬೀಸುವ ಭ್ರಷ್ಟಾಚಾರ ನಿಗ್ರಹದಳ (ಎಸಿಬಿ) ತಂಡದ ದಾಳಿಯಲ್ಲೇ ಗಣಿನಾಡು ಬಳ್ಳಾರಿ ಜಿಲ್ಲೆ ಮುಂದಿದೆ. 3 ವರ್ಷದಲ್ಲೇ
31 ಪ್ರಕರಣಗಳು ದಾಖಲಾಗಿವೆ.
ಬಳ್ಳಾರಿ ನಗರದ ಡಾ.ರಾಜ್ ರಸ್ತೆಯಲ್ಲಿರುವ ಭ್ರಷ್ಟಾಚಾರ ನಿಗ್ರಹದಳ ಕಚೇರಿಯು ಹೈದರಾಬಾದ್ ಕರ್ನಾಟಕ ಭಾಗದ ರಾಯಚೂರು, ಕೊಪ್ಪಳ ಹಾಗೂ ಬಳ್ಳಾರಿ ಜಿಲ್ಲೆಗಳಿಗೆ ತನ್ನ ಕಾರ್ಯ ವ್ಯಾಪ್ತಿಯನ್ನು ವಿಸ್ತರಿಸಿಕೊಂಡಿದೆ.
2017ರಿಂದ ಇಲ್ಲಿಯವರೆಗೆ ಒಟ್ಟು 31 ಪ್ರಕರಣಗಳು ದಾಖಲಾಗಿವೆ. ಬಳ್ಳಾರಿ ಮಹಾನಗರ ಪಾಲಿಕೆ ವ್ಯಾಪ್ತಿಯ 2019ರ ಫೆಬ್ರುವರಿ ತಿಂಗಳಲ್ಲಿ ಮೋಕಾ ರಸ್ತೆಯಿಂದ ವಾಟರ್ ಬೂಸ್ಟರ್ ವರೆಗಿನ ಮೂರನೇ ಹಂತದ ಕುಡಿಯುವ ನೀರು ಪೈಪ್ ಲೈನ್ ಬದಲಾವಣೆಯಲ್ಲಿ ಅಂದಾಜು 20 ಲಕ್ಷ ರೂ.ಗಳ ಅವ್ಯವಹಾರ ನಡೆದಿರುವುದು ಸೇರಿದಂತೆ ಇನ್ನಿತರೆ ಗಂಭೀರ ಸ್ವರೂಪದ ಪ್ರಕರಣಗಳು ದಾಖಲಾಗಿವೆ ಎಂದು ಭ್ರಷ್ಟಾಚಾರ ನಿಗ್ರಹದಳದ ಉಪ- ಪೊಲೀಸ್ ಅಧೀಕ್ಷಕ ಚಂದ್ರ ಕಾಂತ ಪೂಜಾರಿ ತಿಳಿಸಿದರು.
18 ಹಳ್ಳಿಗಳಿಗೆ ನೆರವಾದ ಎಸಿಬಿ: ಬಳ್ಳಾರಿ ತಾಲೂಕಿನ ಪರಮದೇವನಹಳ್ಳಿ ಜೆಸ್ಕಾಂ ವಿಭಾಗದ 18 ಹಳ್ಳಿಗಳ ನೂರಾರು ರೈತರು ಪಂಪ್ ಸೆಟ್ಗಳಿಗೆ ಸಮರ್ಪಕ ವಿದ್ಯುತ್ ಪೂರೈಸುವಂತೆ ಕೋರಿ, ಗ್ರಾಮೀಣ ಉಪವಿಭಾಗದ ಜೆಸ್ಕಾಂ ಕಚೇರಿಗೆ ಅರ್ಜಿಗಳನ್ನು ಸಲ್ಲಿಸಿದ್ದರು. ಜೆಸ್ಕಾಂ ಗ್ರಾಮೀಣ ಉಪ ವಿಭಾಗದ ಕೆಳಹಂತದ ನೌಕರರು ಲಂಚಕ್ಕಾಗಿ ಬೇಡಿಕೆ ಇಟ್ಟಿದ್ದರು. ಬೇಡಿಕೆಯ ಕುರಿತು ಎಸಿಬಿ ಕಚೇರಿಗೆ ರೈತರು ದೂರು ನೀಡಿದ್ದರು. ರೈತರ ದೂರನ್ನು ಆಧರಿಸಿದ ಎಸಿಬಿಯು ಅಧಿಕಾರಿಗಳ ಮೇಲೆ ದಾಳಿ ನಡೆಸಿದರು.ಇದನ್ನರಿತ ಜೆಸ್ಕಾಂ ಗ್ರಾಮೀಣ ಉಪವಿಭಾಗದ ಮೇಲಾಧಿಕಾರಿಯು ಎಸಿಬಿ ದಾಳಿಯಾದ ಮಾರನೇ ದಿನವೇ ದೂರುದಾರರ 3 ಅರ್ಜಿಯೂ ಸೇರಿದಂತೆ ಸರಿಸುಮಾರು 495 ಅರ್ಜಿಗಳನ್ನು ಕ್ಷಣಾರ್ಧದಲ್ಲೇ ವಿಲೇವಾರಿಗೊಳಿಸಿದರು. ರೈತರ ಪಂಪ್ ಸೆಟ್ಗಳಿಗೆ ಸಮರ್ಪಕ ವಿದ್ಯುತ್ ಪೂರೈಕೆಗೆ ಅಗತ್ಯ ಕ್ರಮವಹಿಸಲಾಯಿತು. ಈ ರೀತಿಯಲ್ಲೂ ಕೂಡ ಎಸಿಬಿ ನೆರವಾಯಿತೆಂದು ಪೂಜಾರಿ ತಿಳಿಸಿದರು.
ಜಿಲ್ಲೆಯ ಹೊಸಪೇಟೆ, ಹಗರಿಬೊಮ್ಮನಹಳ್ಳಿ, ಹಡಗಲಿ, ಬಳ್ಳಾರಿ ಹಾಗೂ ಕೊಟ್ಟೂರು ತಾಲೂಕಿನಿಂದ ಹೆಚ್ಚು ಮೂಕ ಅರ್ಜಿಗಳು ಬರುತ್ತವೆ. ಆ ಪೈಕಿ ಕಂದಾಯ, ಸಬ್ ರಿಜಿಸ್ಟ್ರಾರ್, ನಗರಸಭೆ, ಪುರಸಭೆ, ಪಟ್ಟಣ ಪಂಚಾಯಿತಿ, ತಾಲೂಕು ಪಂಚಾಯಿತಿ ಹಾಗೂ ಗ್ರಾಮ ಪಂಚಾಯಿತಿಗೆ ಸಂಬಂಧಿಸಿದ ದೂರುಗಳೇ ಹೆಚ್ಚಿರುತ್ತವೆ. ಕೂಲಂಕುಷವಾಗಿ ಪರಿಶೀಲಿಸಿದ ಬಳಿಕ, ಮುಂದಿನ ಕ್ರಮ ತೆಗೆದುಕೊಳ್ಳಲಾಗುವುದು ಎಂದರು.