ಬಳ್ಳಾರಿ: ಗಣಿ ಜಿಲ್ಲೆಯ ಕ್ರಿಕೆಟ್ ಅಭಿಮಾನಿಗಳು ಈ ಬಾರಿಯ ಪ್ರೀಮಿಯರ್ ಲೀಗ್‌ನಲ್ಲಾದರೂ ರಾಯಲ್ ಚಾಲೆಂಜರ್ಸ್ ಬೆಂಗಳೂರು (ಆರ್‌ಸಿಬಿ) ಗೆಲ್ಲಲಿ ಎಂದು ಕೊಟ್ಟೂರು ತಾಲೂಕಿನ ಆರಾಧ್ಯದೈವ ಕೊಟ್ಟೂರೇಶ್ವರ ದೇವರ ಮೊರೆ ಹೋಗಿದ್ದಾರೆ.
ಪ್ರತಿ ವರ್ಷ ನಡೆಯುವ ಐಪಿಎಲ್ ಪ್ರಿಮಿಯರ್ ಲೀಗ್‌ನಲ್ಲಿ ಇದುವರೆಗೂ ಗೆಲ್ಲದ ಆರ್‌ಸಿಬಿ ಈ ಬಾರಿಯಾದರೂ ಗೆಲ್ಲಲಿ ಎಂದು ಪ್ರಾರ್ಥಿಸಿ ಗಣಿನಾಡಿನ ಕ್ರಿಕೆಟ್ ಅಭಿಮಾನಿಗಳು ಈಚೆಗೆ ಕೊಟ್ಟೂರಿನಲ್ಲಿ ನಡೆದ ಕೊಟ್ಟೂರೇಶ್ವರ ಜಾತ್ರೆಯಲ್ಲಿ ಬಾಳೆ ಹಣ್ಣಿನ ಮೇಲೆ ‘ಈ ಸಲ ಕಪ್ ನಮ್ದೆ’ ಎಂದು ಬರೆದು ಕೊಟ್ಟೂರು ದೇವರಿಗೆ ಆ ಬಾಳೆಹಣ್ಣುಗಳನ್ನು ಸಮರ್ಪಿಸಿರೋದು ಬೆಳಕಿಗೆ ಬಂದಿದೆ. ಅಲ್ಲದೇ ಕೆಲವರು ಬಾಳೆಹಣ್ಣಿನ ಮೇಲೆ 'ಸಂತಾನ ಭಾಗ್ಯ ಕೊಡಪ್ಪ ದೇವರೇ' ಎಂದು ಬರೆದು ಕೊಟ್ಟೂರು ದೇವರಿಗೆ ಬಾಳೆಹಣ್ಣುಗಳನ್ನು ಸಮರ್ಪಿಸಿದ್ದಾರೆ.
ಈ ಬಾರಿಯಾದರೂ ಕಪ್ ಗೆಲ್ಲುತ್ತಾ ಆರ್‌ಸಿಬಿ..? ಮಾರ್ಚ್ 29 ರಿಂದ ಪ್ರಸಕ್ತ ಸಾಲಿನ ಐಪಿಎಲ್ ಲೀಗ್ ಶುರುವಾಗಲಿದ್ದು, ಸತತ 11 ಲೀಗ್ ಪಂದ್ಯಾವಳಿಗಳಲ್ಲಿ ಕಪ್ ತನ್ನದಾಗಿಸಿಕೊಳ್ಳದೇ ಪರದಾಡುತ್ತಿರುವ ‘ಆರ್‌ಸಿಬಿ’ ಈ ಬಾರಿಯಾದರೂ ಐಪಿಎಲ್ ಕಪ್ ಒಲಿಸಿಕೊಳ್ಳುತ್ತಾ ಎನ್ನುವ ಚರ್ಚೆಗಳು ಜಿಲ್ಲೆಯಲ್ಲಿ ಗರಿಗೆದರಿವೆ.
ಈಗಾಗಲೇ ಕ್ರೀಡಾಭಿಮಾನಿಗಳು ಆರ್‌ಸಿಬಿ ಈ ಬಾರಿ ಗೆಲ್ಲಲಿ ಎಂದು ಪ್ರತಿನಿತ್ಯ ದೇವರ ಮೊರೆ ಹೋಗುತ್ತಿದ್ದು, ಜಾತ್ರೆಯ ಸಂದರ್ಭದಲ್ಲೂ ವಿಶಿಷ್ಟ ರೀತಿಯಲ್ಲಿ ಬೇಡಿಕೊಳ್ಳುತ್ತಿದ್ದಾರೆ. ಈ ನಿಟ್ಟಿನಲ್ಲಿ ಕ್ರೀಡಾಭಿಮಾನಿಗಳ ಹರಕೆ ಈ ವರ್ಷವಾದರೂ ಪೂರೈಸಲಿದೆಯಾ ಎಂಬುದನ್ನು ಕಾದು ನೋಡಬೇಕಿದೆ.