ವಿಜಯನಗರ: ಹಗರಿಬೊಮ್ಮನ ಹಳ್ಳಿ ಮತ್ತು ಹಡಗಲಿಯ ಅಯ್ಯಪ್ಪ ಸ್ವಾಮಿ ಮಾಲಾಧಾರಿಗಳು ತಲೆಮೇಲೆ ಇರುಮುಡಿ ಹೊತ್ತು ತ್ರಿವರ್ಣ ಬಾವುಟ ಹಿಡಿದು ನಾಡಿನ ಕಲ್ಯಾಣ ಹಾಗೂ ಭಾರತ-ಆಸ್ಟ್ರೇಲಿಯಾ ನಡುವಣ ವಿಶ್ವಕಪ್ ಕ್ರಿಕೆಟ್ ಫೈನಲ್‌ನಲ್ಲಿ ಭಾರತ ಗೆದ್ದು ಬರಲೆಂದು ಪ್ರಾರ್ಥಿಸಿ ಶಬರಿಮಲೆ ಯಾತ್ರೆ ಕೈಗೊಂಡಿದ್ದಾರೆ.
ಬೆಳಗಾವಿಯಲ್ಲಿ ಕರವೇ ಕಾರ್ಯಕರ್ತರಿಂದ ಪೂಜೆ: ಭಾರತ ಫೈನಲ್ ಪಂದ್ಯವನ್ನೂ ಗೆದ್ದು ಪ್ರಶಸ್ತಿಯನ್ನು ಭಾರತ ಮಾತೆಯ ಮುಡಿಗೇರಿಸಲಿ ಎಂದು ಪ್ರಾರ್ಥಿಸಿ ಬೆಳಗಾವಿಯಲ್ಲಿ ಕರವೇ ಕಾರ್ಯಕರ್ತರು ಪ್ರಾರ್ಥಿಸಿದರು. ರಾಣಿ ಚೆನ್ನಮ್ಮ ವೃತ್ತದ ಬಳಿಯ ಗಣೇಶ ಮಂದಿರದಲ್ಲಿ ಶನಿವಾರ ರಾತ್ರಿ ಪೂಜೆ ಸಲ್ಲಿಸಿದ ನಾರಾಯಣ ಗೌಡ ಬಣದ ಕಾರ್ಯಕರ್ತರು "ಗೆದ್ದು ಬಾ ಭಾರತ" ಎಂದು ಘೋಷಣೆ ಮೊಳಗಿಸಿದರು.
ಕರವೇ ಜಿಲ್ಲಾಧ್ಯಕ್ಷ ದೀಪಕ ಗುಡಗನಟ್ಟಿ ಮಾತನಾಡಿ, ಬೆಳಗಾವಿಯ ಎಲ್ಲ ಜನರ ಪರವಾಗಿ ವಿಘ್ನೇಶ್ವರನಿಗೆ ವಿಶೇಷ ಪ್ರಾರ್ಥನೆ ಸಲ್ಲಿಸಿದ್ದೇವೆ. ನೂರಕ್ಕೆ ನೂರು ಭಾರತ ತಂಡ ಗೆಲ್ಲುತ್ತದೆ ಎಂದು ದೇಶದ ಕೋಟ್ಯಂತರ ಜನರಿಗೆ ವಿಶ್ವಾಸವಿದೆ. ಎಲ್ಲ ಆಟಗಾರರು ಉತ್ತಮ ಪ್ರದರ್ಶನ ತೋರುತ್ತಿದ್ದಾರೆ. ಬಲಿಷ್ಠ ಆಸ್ಟ್ರೇಲಿಯಾ ವಿರುದ್ಧ ಗೆದ್ದು ಭಾರತ ವಿಜಯದ ಪತಾಕೆ ಹಾರಿಸಲಿದೆ ಎಂದರು.
ಹಾವೇರಿಯಲ್ಲಿ ವಿಶೇಷ ಪೂಜೆ: ಫೈನಲ್ ಪಂದ್ಯದಲ್ಲಿ ಭಾರತಕ್ಕೆ ಜಯ ಸಿಗಲೆಂದು ಕ್ರಿಕೆಟ್ ಅಭಿಮಾನಿಗಳು ಹಾವೇರಿಯ ತೇರು ಬೀದಿ ಆಂಜನೇಯ ದೇವಸ್ಥಾನದಲ್ಲಿ ತಿರಂಗ ಹಿಡಿದು ವಿಶೇಷ ಪೂಜೆ ಸಲ್ಲಿಸಿದರು. ಈ ಸಂದರ್ಭದಲ್ಲಿ ಭಾರತಕ್ಕೆ ಜಯವಾಗಲಿ, ಜೈ ಶ್ರೀರಾಮ್ ಎಂದು ಜಯಘೋಷ ಹಾಕಿದರು. ನಮ್ಮ ದೇಶದ ಆಟಗಾರರು ಕಾಂಗರೂ ಪಡೆಗೆ ಸೋಲಿನ ರುಚಿ ತೋರಿಸಬೇಕು. ಭಾರತಕ್ಕೆ ಮೂರನೇ ಬಾರಿಯ ವಿಶ್ವಕಪ್ ಗೆಲುವಿನ ಹಿರಿಮೆ ದೊರೆಯಲಿ ಎಂದು ಹಾರೈಸಿದರು.
ಇದನ್ನೂ ಓದಿ: ಮೂರು ವಿಶ್ವಕಪ್ ಫೈನಲ್ ಆಡಿರುವ ಭಾರತ ಎರಡು ಬಾರಿ ಚಾಂಪಿಯನ್: ಅಂತಿಮ ಪಂದ್ಯಗಳ ಕಿರುನೋಟ