ಹೊಸಪೇಟೆ: ತಾಲೂಕಿನ ಕಮಲಾಪುರದ ಅಟಲ್ ಬಿಹಾರಿ ವಾಜಪೇಯಿ ಜೂಲಾಜಿಕಲ್ ಪಾರ್ಕ್‌ನಲ್ಲಿ ಕರ್ನಾಟಕದ ಅತಿದೊಡ್ಡ ಪಶು ವೈದ್ಯಕೀಯ ಆಸ್ಪತ್ರೆ ನಿರ್ಮಾಣಗೊಂಡಿದೆ. ಜೂನ್ ತಿಂಗಳಿನಿಂದ ಕಾರ್ಯಾರಂಭ ಮಾಡಿದ್ದು, ಸ್ಥಳೀಯವಾಗಿ ಪ್ರಾಣಿಗಳಿಗೆ ಪ್ರಾಯೋಗಿಕವಾಗಿ ಚಿಕಿತ್ಸೆ ನೀಡಲಾಗುತ್ತಿದೆ.
ಆಸ್ಪತ್ರೆಯನ್ನು 1 ಕೋಟಿ ರೂ. ವೆಚ್ಚದಲ್ಲಿ ನಿರ್ಮಾಣ ಮಾಡಲಾಗಿದೆ. ಐದು ಚಿಕಿತ್ಸಾ ಕೊಠಡಿಗಳಿವೆ. ಆಧುನಿಕ ಆಪರೇಷನ್ ಥಿಯೇಟರ್ ಹಾಗೂ ಲ್ಯಾಬ್ ಒಳಗೊಂಡಿದೆ. ಒಂದೇ ಸಮಯದಲ್ಲಿ ನಾಲ್ಕು ಪ್ರಾಣಿಗಳಿಗೆ ಚಿಕಿತ್ಸೆ ನೀಡಬಹುದಾಗಿದೆ.
ಆಸ್ಪತ್ರೆ ಕಾರ್ಯವೈಖರಿ : ಆಸ್ಪತ್ರೆಯಲ್ಲಿರುವ ವೈದ್ಯೆ ಪ್ರತಿದಿನ ಎಲ್ಲಾ ಪ್ರಾಣಿಗಳನ್ನು ವೀಕ್ಷಣೆ ಮಾಡಿ, ಪರೀಕ್ಷೆಗೆ ಒಳಪಡಿಸುತ್ತಾರೆ. ಪ್ರಾಣಿಗಳಿಗೆ ಗಾಯಗಳು ಕಂಡು ಬಂದರೇ, ಆಸ್ಪತ್ರೆಯಲ್ಲಿ ಚಿಕಿತ್ಸೆಯನ್ನು ನೀಡಲಾಗುತ್ತದೆ. ನಂತರ ಜೂಲಾಜಿಕಲ್ ಪಾರ್ಕ್‌ನಲ್ಲಿ ಬಿಡಲಾಗುತ್ತದೆ. ಈ ಮುಂಚೆ ಬೇರೆ ಕಡೆಯಿಂದ ವೈದ್ಯರು ಬಂದು ಪ್ರಾಣಿಗಳಿಗೆ ಚಿಕಿತ್ಸೆ ನೀಡುತ್ತಿದ್ದರು. ಆದರೆ, ಈಗ ಸ್ಥಳೀಯವಾಗಿ ಚಿಕಿತ್ಸೆ ನೀಡಲಾಗುತ್ತಿದೆ. ಈಗಾಗಲೇ ನಾಲ್ಕು ಪ್ರಾಣಿಗಳಿಗೆ ಶಸ್ತ್ರ ಚಿಕಿತ್ಸೆಯನ್ನು ಮಾಡಲಾಗಿದೆ.
ಯಾವೆಲ್ಲಾ ಸೌಲಭ್ಯಗಳಿವೆ?: ಶಸ್ತ್ರ ಚಿಕಿತ್ಸಾ ಸೌಲಭ್ಯ, ರಕ್ತ ಮತ್ತು ಮೂತ್ರ ಪರೀಕ್ಷಾ ಕೇಂದ್ರ, ಮೈಕ್ರೋಸ್ಕೋಪ್, ಡೆಂಟಲ್ ಚಿಕಿತ್ಸೆ, ಮೂಳೆ ಚಿಕಿತ್ಸೆ ಸೇರಿ ಇನ್ನಿತರರ ಚಿಕಿತ್ಸಾ ಸೌಲಭ್ಯಗಳು ಲಭ್ಯವಿದೆ. ಪಶು ಆಸ್ಪತ್ರೆಯು ಕೇವಲ ಪಾರ್ಕ್ ಪ್ರಾಣಿಗಳಿಗೆ ಮಾತ್ರ ಚಿಕಿತ್ಸೆಗೆ ಸೀಮಿತವಾಗಿಲ್ಲ. ಸ್ಥಳೀಯವಾಗಿ ಗಂಭೀರ ಗಾಯಗೊಂಡ ಪ್ರಾಣಿಗಳಿಗೆ ಸಹ ಚಿಕಿತ್ಸೆ ನೀಡಲಾಗುತ್ತಿದೆ. ಸದ್ಯ ಆಸ್ಪತ್ರೆಯಲ್ಲಿ ಒಬ್ಬರು ವೈದ್ಯೆ ಹಾಗೂ ಓರ್ವ ಪಶು ವೈದ್ಯಕೀಯ ಸಹಾಯಕ ಕಾರ್ಯನಿರ್ವಹಿಸುತ್ತಿದ್ದಾರೆ.
ಪಾರ್ಕ್ ಇತಿಹಾಸ : ಈ ಮುಂಚೆ ಬಳ್ಳಾರಿಯಲ್ಲಿ ಕಿರು ಮೃಗಾಲಯವಿತ್ತು. ಅದನ್ನು ಕಮಲಾಪುರದ ಬಿಳಿಕಲ್ ಪಶ್ಚಿಮ ಹಾಗೂ ಅರಣ್ಯ ಪ್ರದೇಶ ವ್ಯಾಪ್ತಿಗೆ ಮೃಗಾಲಯವನ್ನು ಸ್ಥಳಾಂತರ ಮಾಡಲಾಯಿತು. ಅರಣ್ಯ ಪ್ರದೇಶಕ್ಕೆ ಸೇರಿದ್ದ 141.59 ಹೆಕ್ಟೇರ್ ಅನ್ನು ಕರ್ನಾಟಕ ಮೃಗಾಲಯಕ್ಕೆ ಹಸ್ತಾಂತರ ಮಾಡಲಾಯಿತು. 2017 ನವೆಂಬರ್ 11 ರಂದು ಅಟಲ್ ಬಿಹಾರಿ ವಾಜಪೇಯಿ ಜೂಲಾಜಿಕಲ್ ಪಾರ್ಕ್ ಹಾಗೂ ಇಂದಿರಾ ಪ್ರಿಯದರ್ಶಿನಿ ಜಿಂಕೆ ಸಫಾರಿ 30.14 ಹೆಕ್ಟೇರ್ ಪ್ರದೇಶವನ್ನೊಳಗೊಂಡಿದೆ. ಹುಲಿಗಳ ಸಫಾರಿ 21.02 ಹೆಕ್ಟೇರ್, ಸಿಂಹಗಳ ಸಫಾರಿ 19.33 ಹೆಕ್ಟೇರ್ ಪ್ರದೇಶವನ್ನೊಳಗೊಂಡಿದೆ.
ಉಪ ಸಂರಕ್ಷಣಾಧಿಕಾರಿ ಕಿರಣ್ ಕುಮಾರ ಅವರು ಮಾತನಾಡಿ, ಒಂದು ಕೋಟಿ ರೂ.ವೆಚ್ಚದಲ್ಲಿ ಪಶು ಆಸ್ಪತ್ರೆಯನ್ನು ನಿರ್ಮಾಣ ಮಾಡಲಾಗಿದ್ದು, ಕರ್ನಾಟಕ ಅತೀ ದೊಡ್ಡ ಪಶು ಆಸ್ಪತ್ರೆ ಇದಾಗಿದೆ. ಎರಡನೇಯ ಸ್ಥಾನದಲ್ಲಿ ಬನ್ನೇರಘಟ್ಟ ಅಸ್ಪತ್ರೆ ಇದೆ. ಈಶಾನ್ಯ ಶಿಕ್ಷಕರ ಚುನಾವಣೆ ಹಿನ್ನೆಲೆ ನೀತಿ ಸಂಹಿತೆ ಜಾರಿಯಲಿದ್ದು, ಉದ್ಘಾಟನೆ ಮಾಡಿಲ್ಲ ಎಂದು ಹೇಳಿದರು.