ಹೊಸಪೇಟೆ : ಕೊಪ್ಪಳದ ಕವಿ ಸಿರಾಜ್ ಮತ್ತು ಬೀದರ್ ಜಿಲ್ಲೆಯ ಶಾಹಿನ ಶಿಕ್ಷಣ ಸಂಸ್ಥೆ ವಿರುದ್ಧ ದಾಖಲಾಗಿರುವ ದೇಶದ್ರೋಹ ಪ್ರಕರಣವನ್ನು ಹಿಂಪಡೆಯಬೇಕು ಎಂದು ಅಖಿಲ ಭಾರತ ವಕೀಲರ ಒಕ್ಕೂಟದ ಜಿಲ್ಲಾ ಕಾರ್ಯದರ್ಶಿ ಎ.ಕರುಣನಿಧಿ ಆಗ್ರಹಿಸಿದ್ದಾರೆ.
ನಗರದಲ್ಲಿ ಕವಿ ಸಿರಾಜ್ ವಿರುದ್ಧ ದೇಶದ್ರೋಹದ ದೂರು ವಾಪಾಸ್ ಪಡೆಯಬೇಕು ಎಂದು ವಕೀಲರ ಸಂಘದದಿಂದ ಉಪ ತಹಶೀಲ್ದಾರ್ ಅಮರನಾಥ ಅವರಿಗೆ ಮನವಿ ಸಲ್ಲಿಸಿ ಅವರು ಮಾತನಾಡಿದರು.
ವಾಚಿಸಿದ ವಿವಾದಿತ ಕವನದಲ್ಲೇನಿತ್ತು?
ಆನೆಗೊಂದಿ ಉತ್ಸವದ ಕವಿಗೋಷ್ಠಿಯಲ್ಲಿ ಕವಿ ಸಿರಾಜ್ ಅವರು ಪೌರತ್ವ (ತಿದ್ದುಪಡಿ) ಕಾಯ್ದೆಯ ಕುರಿತು ಕೇಂದ್ರ ಸರ್ಕಾರಕ್ಕೆ ತಮ್ಮ ಕವಿತೆಯ ಮೂಲಕ ಪ್ರಶ್ನೆ ಮಾಡಿದ್ದರು. "ಆಧಾರ್, ರೇಷನ್ ಕಾರ್ಡ್‌ಗಳ ಕ್ಯೂನಲ್ಲಿ, ಥಂಬಿನ ಸರ್ವರಿನ ಮಂಗನಾಟದಲ್ಲಿ, ಬದುಕನ್ನು ಕಳೆದುಕೊಳ್ಳತ್ತಿರುವರು. ದಾಖಲೆ ಕೇಳುವವನೇ ನಿನ್ನ ದಾಖಲೆ ಯಾವಾಗ ನೀಡುತ್ತಿ" ಎಂದು ಕವಿತೆ ವಾಚನ ಮಾಡಿದ್ದರು. ಅದಕ್ಕಾಗಿ ಅವರ ವಿರುದ್ಧ ದೇಶದ್ರೋಹ ಪ್ರಕರಣ ದಾಖಲಿಸಲಾಗಿತ್ತು. ಅದೇ ರೀತಿ ಬೀದರ್ ಜಿಲ್ಲೆಯ ಶಾಹಿನ್ ಶಿಕ್ಷಣ ಸಂಸ್ಥೆ ಮುಖ್ಯ ಶಿಕ್ಷಕಿಯ ವಿರುದ್ಧವೂ ಇದೆ ಮಾದರಿಯ ಪ್ರಕರಣ ದಾಖಲಿಸಿದ್ದಾರೆ. ಇದು ಸರಿಯಲ್ಲ, ಸಾಮಾಜಿಕ ಕಳಕಳಿ ಹೊಂದಿರುವ ವ್ಯಕ್ತಿಗಳ ಮೇಲಿನ ದೂರು ಹಿಂಪಡೆಯಬೇಕೆಂದು ಆಗ್ರಹಿಸಿದರು.