ಬಳ್ಳಾರಿ: ಜಿಲ್ಲೆಯ ಹೊಸಪೇಟೆ ನಗರದ ನೂರು ಹಾಸಿಗೆ ಆಸ್ಪತ್ರೆಯಲ್ಲಿ ಮೃತಪಟ್ಟ ವ್ಯಕ್ತಿಯ ವಿಡಿಯೊ ಚಿತ್ರೀಕರಿಸಿ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಮಾಡಿರುವ ವ್ಯಕ್ತಿಯ ವಿರುದ್ಧ ಕೇಸ್ ದಾಖಲಿಸಲಾಗುವುದೆಂದು ಜಿಲ್ಲಾಧಿಕಾರಿ ಎಸ್. ಎಸ್. ನಕುಲ್ ತಿಳಿಸಿದ್ದಾರೆ.
ಬಳ್ಳಾರಿಯಲ್ಲಿಂದು ಸುದ್ದಿಗಾರರೊಂದಿಗೆ ಡಿಸಿ ನಕುಲ್ ಅವರು ಮಾತನಾಡಿ, ಹೊಸಪೇಟೆಯ ನೂರು ಹಾಸಿಗೆ ಆಸ್ಪತ್ರೆಯು ಕೋವಿಡ್ ಆಸ್ಪತ್ರೆಯಲ್ಲ. ನೇಣುಬಿಗಿದುಕೊಂಡು ಸಾವಿಗೆ ಯತ್ನಿಸಿದ ವ್ಯಕ್ತಿಯು ಸಾಯುವಲ್ಲಿ ವಿಫಲನಾಗಿದ್ದ. ಆದರೆ, ಉಸಿರಾಡಲು ತೊಂದರೆ ಅನುಭವಿಸುತ್ತಿದ್ದ ಆತನನ್ನು ನೂರು ಹಾಸಿಗೆ ಆಸ್ಪತ್ರೆಯಲ್ಲಿ ದಾಖಲಿಸಲಾಗಿತ್ತು. ಆದರೆ, ಚಿಕಿತ್ಸೆ ಫಲಕಾರಿಯಾಗದೆ ಆತ ಮೃತಪಟ್ಟಿದ್ದಾರೆ. ಇನ್ನೂ ಮೃತದೇಹಕ್ಕೆ ವೈದ್ಯಕೀಯ ಶಿಷ್ಟಾಚಾರವನ್ನ ಮುಗಿಸಿ, ಪಿಪಿಇ ಕಿಟ್ ತರಲು ಒಳಗಡೆ ಹೋಗಿದ್ದ ಐದಾರು ನಿಮಿಷದೊಳಗೆ ಯಾರೋ ವ್ಯಕ್ತಿ ಈ ವಿಡಿಯೋ ಚಿತ್ರೀಕರಣ ಮಾಡಿದ್ದಾರೆ. ಈ ರೀತಿಯಾಗಿ ಉದ್ದೇಶಪೂರ್ವಕವಾಗಿ ವಿಡಿಯೋ ಚಿತ್ರೀಕರಣ ಮಾಡುವ ಮೂಲಕ ಮಾನವೀಯತೆ ಮೆರೆತು ಕ್ರೂರಿ ತನವನ್ನು ಪ್ರದರ್ಶಿಸಿದ್ದಾರೆ ಇದು ಸರಿಯಲ್ಲ ಎಂದು ಡಿಸಿ ನಕುಲ್ ಹೇಳಿದರು.
ಈ ರೀತಿ ಉದ್ದೇಶಪೂರ್ವಕವಾಗಿ ವಿಡಿಯೋ ಚಿತ್ರೀಕರಣ ಮಾಡಿರೋದು ತರವಲ್ಲ. ಮೃತ ವ್ಯಕ್ತಿಯ ಕುಟುಂಬಸ್ಥರೂ ಕೂಡ ವೈದ್ಯರ ಬಗ್ಗೆ ಉತ್ತಮ ಪ್ರತಿಕ್ರಿಯೆಯನ್ನೇ ವ್ಯಕ್ತಪಡಿಸಿದ್ದಾರೆ. ಹೀಗಾಗಿ, ಆ ವಿಡಿಯೋ ಚಿತ್ರೀಕರಣ ಮಾಡಿ ಸಾಮಾಜಿಕ ಜಾಲತಾಣಗಳಲ್ಲಿ ಹರಿಬಿಟ್ಟ ವ್ಯಕ್ತಿಯ ವಿರುದ್ಧ ಕ್ರಿಮಿನಲ್ ಕೇಸ್ ದಾಖಲಿಸಲಾಗುವುದೆಂದು ಜಿಲ್ಲಾಧಿಕಾರಿ ನಕುಲ್ ಎಚ್ಚರಿಸಿದ್ದಾರೆ.