ಬಳ್ಳಾರಿ: ವಿಜಯನಗರ ಜಿಲ್ಲೆಯ ಕೂಡ್ಲಿಗಿ ತಾಲೂಕಿನ ಶ್ರೀಕಂಠಾಪುರ ತಾಂಡಾದ ಮನೆಯೊಂದರಲ್ಲಿ ನೆಲೆಸಿರುವ ದಂಪತಿಗೆ ಕೊರೊನಾ ಸೋಂಕಿರೋದು ದೃಢಪಟ್ಟಿದೆ. ಆದರೆ, ಆ ಸೋಂಕಿತ ಪೋಷಕರೊಂದಿಗೆ ಐದು ವರ್ಷದ ಮಗುವೊಂದು ವಾಸ ಮಾಡುತ್ತಿರೋದು ನಿಜಕ್ಕೂ ಮನ ಕಲಕುವಂತಿದೆ.
ಕೂಡ್ಲಿಗಿ ತಾಲೂಕಿನ ಶ್ರೀಕಂಠಾಪುರ ತಾಂಡಾದ ಗಂಗಾಧರ ನಾಯ್ಕ (34), ಸುಮಿತ್ರ ಬಾಯಿ (28) ಎಂಬುವವರು ಕಳೆದ 6 ದಿನಗಳಿಂದಲೂ ಕೊರೊನಾ ಸೋಂಕಿನಿಂದ ಬಳಲುತ್ತಿದ್ದಾರೆ. ಪುರುಷೋತ್ತಮ ನಾಯ್ಕ (5) ಅವರೊಂದಿಗೆ ವಾಸ ಮಾಡುತ್ತಿರುವ ಪುಟ್ಟ ಬಾಲಕ. ಕಡು ಬಡತನದಿಂದಲೇ ಬಳಲುತ್ತಿದ್ದ ಈ ಕುಟುಂಬವು ಸಣ್ಣದಾದ ಮನೆಯಲ್ಲೇ ಜೀವನ ಸಾಗಿಸುತ್ತಿದೆ. ಕಳೆದ ಆರು ದಿನಗಳ ಕಾಲ ಕೂಲಿಗೆ ಹೋಗದೆ ಮನೆಯಲ್ಲೇ ಇದ್ದ ಅಲ್ಪಸ್ವಲ್ಪ ದಿನಸಿಯಲ್ಲೇ ಅಡುಗೆ ತಯಾರಿಸಿಕೊಂಡು ಊಟ ಮಾಡುತ್ತಿದ್ದಾರೆ.
ದುರಂತವೆಂದರೆ ಆ ಮಗುವಿಗೆ ಆ ಪೋಷಕರು ತಯಾರಿಸುವ ಅಡುಗೆಯನ್ನೇ ಉಣಬಡಿಸುತ್ತಿದ್ದಾರೆ. ಕೊರೊನಾ ಸೋಂಕಿದ್ದರೂ ಕೂಡ ಆ ಮಗುವನ್ನು ನೋಡಿಕೊಳ್ಳಬೇಕಾದ ಪರಿಸ್ಥಿತಿ ಆ ಪೋಷಕರ ಮೇಲಿರುವುದು ಮನ ಕಲಕುವಂತಿದೆ.