ಹೊಸಪೇಟೆ: ನಗರ ನಿವಾಸಿಗಳ ನಿದ್ದೆಗೆಡಿಸಿದ್ದ ಕಳ್ಳರನ್ನು ನಗರದ ಬಡಾವಣೆ ಪೊಲೀಸರು ಹೆಡೆಮುರಿಕಟ್ಟುವಲ್ಲಿ ಯಶಸ್ವಿಯಾಗಿದ್ದಾರೆ.
ಸುಮಾರು ₹ 6 ಲಕ್ಷಕ್ಕೂ ಅಧಿಕ ಬೆಲೆ ಬಾಳುವ, 160 ಗ್ರಾಂ ಬಂಗಾರವನ್ನು ಬಂಧಿತ ಆರೋಪಿಗಳಿಂದ ವಶಪಡಿಸಿಕೊಂಡಿದ್ದಾರೆ. ತಾಲೂಕಿನಲ್ಲಿ ಎರಡು ತಿಂಗಳನಿಂದ ಐದು ಜನರ ಕಳ್ಳರ ಗುಂಪು ಸಕ್ರಿಯವಾಗಿತ್ತು. ಹೊಸಪೇಟೆಯ ಪ್ರಮುಖ ಕಾಲೋನಿಗಳನ್ನು ಟಾರ್ಗೆಟ್ ಮಾಡಿ, ತಮ್ಮ ಕೈ ಚಳಕವನ್ನು ತೋರಿಸುತ್ತಿದ್ದರು. ಎಂಜೆನಗರ, ಚಪ್ಪರದಹಳ್ಳಿ, ನೆಹರು ಕಾಲೋನಿ, ಮತ್ತು ಜೆಪಿನಗರದಲ್ಲಿ ಬೀಗ ಹಾಕಿದ ಮನೆಗಳನ್ನು ಗುರುತಿಸಿ ಕಳ್ಳತನಕ್ಕೆ ಯೋಜನೆ ರೂಪಿಸುತ್ತಿದ್ದರು ಎಂದು ಡಿವೈಎಸ್ಪಿ ರಘುಕುಮಾರ ಈಟಿವಿ ಭಾರತಕ್ಕೆ ತಿಳಿಸಿದರು.
ಬಡಾವಣೆ ಪೊಲೀಸ್ ವ್ಯಾಪ್ತಿಯಲ್ಲಿ ಮೂರು ಮನೆ ಹಾಗೂ ಪಟ್ಟಣ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಒಂದು ಕಳ್ಳತನ ಪ್ರಕರಣ ದಾಖಲಾಗಿತ್ತು. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಮರಡಿ ಅಲಿಯಾಸ್ ಸಣ್ಣಜಂಬಯ್ಯ (25) ಹೊಸಪೇಟೆಯ ನೇಕಾರ ಕಾಲೋನಿಯ ಎಸ್.ಕಿರಣ (25) ಹಾಗೂ ಒಬ್ಬ ಬಾಲಾಪರಾಧಿ ಸೇರಿದಂತೆ ಮೂವರನ್ನು ಬಂಧಿಸಲಾಗಿದ್ದು, ಪರಾರಿಯಾದ ಆರೋಪಿಗಳ ಬಂಧನಕ್ಕೆ ಬಲೆ ಬೀಸಲಾಗಿದೆ ಎಂದು ತಿಳಿಸಿದರು.
ಇನ್ನು, ಪೊಲೀಸ್ ಅಧಿಕಾರಿಗಳ ಈ ಕಾರ್ಯಕ್ಕೆ ಸಾರ್ವಜನಿಕ ವಲಯದಿಂದ ಮೆಚ್ಚುಗೆಯೂ ವ್ಯಕ್ತವಾಗಿದೆ.