ಬಳ್ಳಾರಿ: ಜಿಲ್ಲೆಯಲ್ಲಿ ದಿನೇ ದಿನೆ ಕೊರೊನಾ ಸೋಂಕಿತರ ಸಂಖ್ಯೆ ಹೆಚ್ಚಳವಾಗುತ್ತಿರುವುದರ ಜೊತೆಯಲ್ಲಿ ಸೋಂಕಿತರ ಚೇತರಿಕೆ ಪ್ರಮಾಣದಲ್ಲೂ ಸಹ ಹೆಚ್ಚಳವಾಗುತ್ತಿದೆ. ಈ ಸಂಕಷ್ಟದ ನಡುವೆ 85 ವಯಸ್ಸಿನ ವೃದ್ದೆಯೊಬ್ಬರು ಕೊರೊನಾ ಮಹಾಮಾರಿಯಿಂದ ಗುಣಮುಖರಾಗಿರುವುದು ಸಮಾಧಾನದ ಸಂಗತಿಯಾಗಿದೆ.
ಲೋಕೀಕೆರೆ ಗ್ರಾಮದ ಹನುಮಕ್ಕ(85) ಸೋಂಕಿನಿಂದ ಗುಣಮುಖರಾದ ವೃದ್ಧೆ. ಸ್ವಗ್ರಾಮಕ್ಕೆ ಬಂದಿರುವ ಇವರು ಗ್ರಾಮ ಸ್ವಚ್ಚತೆ, ಸೋಂಕು ತಗುಲದಂತೆ ದ್ರಾವಣ ಸಿಂಪಡಣೆ ಮಾಡಿಕೊಳ್ಳವಂತೆ ಸಲಹೆ ನೀಡಿ, ಧೈರ್ಯ ತುಂಬುತ್ತಿದ್ದಾರೆ. ಇದು ಗ್ರಾಮದ ಜನರ ಸಂತಸಕ್ಕೆ ಕಾರಣವಾಗಿದೆ. ಇವರಿಗೆ ಮೊಮ್ಮಗನ ಪ್ರಾಥಮಿಕ ಸಂಪರ್ಕದಿಂದಾಗಿ ಜು. 3ರಂದು ಸೋಂಕು ದೃಢಪಟ್ಟಿತು. ಚಿಕಿತ್ಸೆಗಾಗಿ ಜಿಂದಾಲ್‍ನ ಕೋವಿಡ್ ಆಸ್ಪತ್ರೆಗೆ ದಾಖಲಾಗಿದ್ದರು. ನಂತರ 11 ದಿನಗಳ ಕಾಲ ಚಿಕಿತ್ಸೆ ಪಡೆದು ಗುಣಮುಖರಾಗಿ ಸೋಮವಾರ ಸ್ವ ಗ್ರಾಮ ಲೋಕೀಕೆರೆಗೆ ಬಂದಿದ್ದಾರೆ.
ಈ ಸಂದರ್ಭದಲ್ಲಿ ಮಾತನಾಡಿದ ಅವರು, ಕೊರೊನಾ ಎಂದರೆ ಭಯಬೇಡ. ಹೊಟ್ಟೆ ತುಂಬ ತಿನ್ನಿ, ಮೈಯಾಗಿನ ಶಕ್ತಿ ಹೆಚ್ಚಿಸಿಕೊಳ್ಳಿ ಎಂದಿದ್ದಾರೆ. ಅಷ್ಟೇ ಅಲ್ಲದೆ ರೋಗ ಬಂತೆಂದು ಕೊರಗದಿರಿ, ಆತ್ಮಸ್ಥೈರ್ಯದಿಂದ ಎದುರಿಸಿ ಗೆಲ್ಲಬೇಕು ಎಂದು ಅಜ್ಜಿ ಕಿವಿ ಮಾತು ಸಹ ಹೇಳಿದ್ದಾರೆ. ಟಿಬಿ ಕಾಯಿಲೆ ಬಂದರೆ ಗುಣಮುಖರಾಗಲು ಆರು ತಿಂಗಳು ಬೇಕು. ಆದರೆ, ಕೊರೊನಾ ಬಂದರೆ ಸರಿಯಾಗಿ ಒಂದು ವಾರ ಕಾಲ ಚಿಕಿತ್ಸೆ ಪಡೆದರೆ ಸಾಕು ಗುಣಮುಖರಾಗಿ ಮನೆಗೆ ಬರುತ್ತೀರಿ ಎಂದು ಅಜ್ಜಿ ಎಲ್ಲರಿಗೂ ಧೈರ್ಯ ತುಂಬಿದೆ.
ಸೋಂಕಿನಿಂದ ಗುಣಮುಖರಾದ ಇವರನ್ನು ಕಾನಾ ಹೊಸಹಳ್ಳಿಯ ಉಪತಹಶೀಲ್ದಾರ್ ಚಂದ್ರಮೋಹನ್, ಹುಡೇಂ ಆಸ್ಪತ್ರೆ ಸಿಬ್ಬಂದಿ ಟಿ.ಎಲ್.ಸ್ವಾಮಿ, ಮಲ್ಲಿಕಾ, ಗ್ರಾಮಲೆಕ್ಕಾಧಿಕಾರಿ ಮರಳುಸಿದ್ದಪ್ಪ, ತ್ರಿವೇಣಿ, ಶಾಂತಣ್ಣ ಹಾಗೂ ಅಂಗನವಾಡಿ, ಆಶಾ ಕಾರ್ಯಕರ್ತೆಯರು ಸ್ವಾಗತಿಸಿದರು.