ಹೊಸಪೇಟೆ: ಅಂತ್ಯೋದಯ, ಬಿಪಿಎಲ್ ಪಡಿತರ ಚೀಟಿ ಹೊಂದಿರುವ ವಿಜಯನಗರ ಕ್ಷೇತ್ರದ 60 ಸಾವಿರ ಬಡ ಕುಟುಂಬಗಳಿಗೆ ಆಹಾರದ ಕಿಟ್ ಒದಗಿಸಲಾಗುವುದು ಎಂದು ಸಚಿವ ಆನಂದ್ ಸಿಂಗ್ ತಿಳಿಸಿದರು.
ಅಕ್ಕಿ, ಬೇಳೆ, ಉಪ್ಪು ಸೇರಿದಂತೆ ದಿನಸಿಯನ್ನು ಏಪ್ರಿಲ್ 17ರಂದು ವಿತರಿಸಲಾಗುವುರು ಸಚಿವರು ತಿಳಿಸಿದರು.
ಇಲ್ಲಿನ ಪಟೇಲ್ ನಗರದ ಬಿಜೆಪಿ ಕಚೇರಿಯಲ್ಲಿ ಮಾತನಾಡಿದ ಅವರು, ಕ್ಷೇತ್ರದಲ್ಲಿ ಯಾರೂ ಹಸಿವಿನಿಂದ ಬಳಲಬಾರದು. ಕೋವಿಡ್-19 ನಿಂದಾಗಿ ಬಡವರು, ನಿರ್ಗತಿಕರು, ಅಲೆಮಾರಿಗಳು ಸೇರಿದಂತೆ ಕೂಲಿ ಕಾರ್ಮಿಕರು ಕಂಗಾಲಾಗಿದ್ದಾರೆ. ಅವರಿಗೆ ಆಹಾರದ ಕಿಟ್ಗಳನ್ನು ವಿತರಿಸಲಾಗುವುದು ಎಂದರು.
ಕ್ಷೇತ್ರದಲ್ಲಿ ಒಟ್ಟು 5,070 ಅಂತ್ಯೋದಯ, 51,303 ಬಿಪಿಎಲ್ ಪಡಿತರ ಚೀಟಿಯನ್ನು ಹೊಂದಿದ ಫಲಾನುಭವಿಗಳಿದ್ದಾರೆ. ಸುಮಾರು 60 ಸಾವಿರ ಬಡ, ನಿರ್ಗತಿಕ ಕುಟುಂಬಗಳಿವೆ. ಅವರಿಗೆ ಜೋಳ 6 ಕೆ.ಜಿ, ತೊಗರಿ ಬೇಳೆ 3ಕೆ.ಜಿ., ಎಣ್ಣೆ 2 ಲೀಟರ್, 400 ಗ್ರಾಂ ಖಾರಪುಡಿ, 150 ಗ್ರಾಂ ಹಾಲಿನ ಪುಡಿ, 100 ಗ್ರಾಂ ಅರಿಶಿಣ, 100 ಗ್ರಾಂ ಜೀರಿಗೆ, 100 ಗ್ರಾಂ ಬೆಳ್ಳುಳ್ಳಿ, ಉಪ್ಪು ಸೇರಿದಂತೆ ಒಬ್ಬರಿಗೆ 1,015 ರೂಪಾಯಿಗಳ ಕಿಟ್ ಅನ್ನು ಸ್ವಂತ ಹಣದಲ್ಲಿ ವಿತರಿಸಲಾಗುತ್ತಿದೆ ಎಂದು ತಿಳಿಸಿದರು.
ಮುಂದಿನ ದಿನಗಳಲ್ಲಿ ಜಿಲ್ಲೆಯ 10 ತಾಲೂಕುಗಳಿಗೆ ಆಹಾರದ ಕಿಟ್ಗಳನ್ನು ನೀಡುವ ಯೋಜನೆ ಹಾಕಿಕೊಂಡಿದ್ದೇವೆ. ಅದರಂತೆ ತಾಲೂಕುಗಳಿಗೆ 10 ಸಾವಿರ ಕಿಟ್ಗಳನ್ನು ನೀಡಲಾಗುತ್ತದೆ. ಇದಕ್ಕೆ ಯಾವುದೇ ಕಾರ್ಖಾನೆಗಳ ಹಣ ಕೇಳಿಲ್ಲ. ನನ್ನ ಮೇಲೆ ಆರೋಪಗಳನ್ನು ಮಾಡುವವರು ಮಾಡಲಿ ಎಂದು ಅಭಿಪ್ರಾಯ ವ್ಯಕ್ತಪಡಿಸಿದರು.