ಬಳ್ಳಾರಿ: 35 ಲಕ್ಷ ರೂಪಾಯಿ ಮೌಲ್ಯದ 35 ಬೈಕ್ಗಳನ್ನು ಕದ್ದ ನಾಲ್ವರು ಖದೀಮರನ್ನು ಬಳ್ಳಾರಿ ಕೌಲ್ ಬಜಾರ್ ಪೊಲೀಸರು ಹೆಡೆಮುರಿ ಕಟ್ಟಿದ್ದಾರೆ. ಅಬ್ದುಲ್ ರೆಹಮಾನ್, ಮೊಹಮ್ಮದ್ ಸುಹೇಲ್, ಶೇಖ್ ಅಮನ್, ಹೈದರ್ ಅಲಿ ಬಂಧಿತ ಆರೋಪಿಗಳು.
ಸಂಬಂಧಿಕರಾಗಿರುವ ನಾಲ್ವರು ಯುವಕರು ಕಳೆದ ಆರು ತಿಂಗಳ ಹಿಂದೆ ಶೋಕಿ ಮಾಡಲು ಬೈಕ್ ಒಂದನ್ನು ಕಳ್ಳತನ ಮಾಡಿದ್ದಾರೆ. ಆ ಬೈಕ್ನಲ್ಲಿ ಒಂದಷ್ಟು ಊರನ್ನು ಸುತ್ತಿದ ಈ ಯುವಕರು ನಂತರ ಅದನ್ನು ಮಾರಾಟ ಮಾಡಿ ಬಂದ ಹಣದಿಂದ ಕುಡಿದು ತಿಂದು ಮಜಾ ಮಾಡಿದರು. ಆರಂಭದಲ್ಲಿ ಶೋಕಿಗಾಗಿ ಮಾಡಿದ ಕೃತ್ಯ ನಂತರ ಹವ್ಯಾಸವಾಗಿ ಬಿಟ್ಟಿತು.
ಕಳೆದ ಮೂರ್ನಾಲ್ಕು ತಿಂಗಳಲ್ಲಿ ಒಂದರ ನಂತರ ಮತ್ತೊಂದು ಬೈಕ್ ಕದಿಯೋ ಮೂಲಕ ಸರಿಸುಮಾರು ಮೂವತ್ತೈದು ಬೈಕ್ಗಳನ್ನು ಕದ್ದಿದ್ದಾರೆ. ಅವನ್ನು ಮಾರಾಟ ಮಾಡೋ ಮೂಲಕ ನಿತ್ಯವೂ ಬಳ್ಳಾರಿ, ಹೊಸಪೇಟೆ ಸೇರಿದಂತೆ ಆಂಧ್ರದಲ್ಲೂ ಓಡಾಟ ಮಾಡಿ ಲೈಫ್ ಎಂಜಾಯ್ ಮಾಡಿದ್ದಾರೆ. ಕದ್ದ ಬೈಕ್ಗಳ ಪೈಕಿ 30ಕ್ಕೂ ಹೆಚ್ಚು ಬೈಕ್ಗಳು ಪಲ್ಸರ್ ಬೈಕ್ಗಳೇ ಆಗಿದ್ದವು. ನಾಲ್ವರನ್ನು ಬಂಧಿಸಿ ವಿಚಾರಣೆ ನಡೆಸಿದಾಗ ಈ ವಿಚಾರಗಳನ್ನು ಬಾಯ್ಬಿಟ್ಟಿದ್ದಾರೆ.
ಮೊದಲಿಗೆ ಒಂದು ಬೈಕ್ ಟಾರ್ಗೆಟ್ ಮಾಡುತ್ತಾರೆ. ಆ ಬೈಕ್ ಒಂದು ದಿನದಲ್ಲಿ ಎಲ್ಲೆಲ್ಲಿಗೆ ಹೋಗುತ್ತದೆ, ಯಾವ ಯಾವ ಸ್ಥಳದಲ್ಲಿ ಎಷ್ಟೆಷ್ಟು ಹೊತ್ತು ನಿಲ್ಲುತ್ತದೆ ಎನ್ನುವ ಎಲ್ಲ ಮಾಹಿತಿಯನ್ನು ಓರ್ವ ಆರೋಪಿ ಫಾಲೋ ಆಪ್ ಮಾಡಿ ಮಾಹಿತಿಯನ್ನು ಪಡೆಯುತ್ತಾನೆ. ನಂತರ ಸಮಯ ನೋಡಿಕೊಂಡು ಕಳ್ಳತನ ಮಾಡುತ್ತಿದ್ದರು. ಕೆಲವನ್ನು ರಾತ್ರಿ ವೇಳೆ ಕದ್ದರೆ, ಬಹುತೇಕ ಬೈಕ್ಗಳನ್ನು ಹಗಲಿನಲ್ಲೇ ಕದ್ದಿದ್ದಾರೆ.
ಇದನ್ನೂ ಓದಿ: ಆ್ಯಂಬುಲೆನ್ಸ್ ಅಪಘಾತ ಪ್ರಕರಣ.. ಚಾಲಕ ಪೊಲೀಸ್ ವಶಕ್ಕೆ, ರಕ್ತದ ಮಾದರಿ ಆಸ್ಪತ್ರೆಗೆ ರವಾನೆ
ಸಿಸಿಕ್ಯಾಮರಾದಲ್ಲಿ ಸೆರೆಯಾಗಿರುವ ದೃಶ್ಯಗಳ ಆಧಾರದಲ್ಲಿ ಪೊಲೀಸರು ಈ ನಾಲ್ವರು ಆರೋಪಿಗಳ ಮೇಲೆ ನಿರಂತರವಾಗಿ ಕಣ್ಣಿಡುವ ಮೂಲಕ ಚಲನ ವಲನವನ್ನು ಗಮನಿಸಿ ಒಬ್ಬೊಬ್ಬರನ್ನಾಗಿ ಬಂಧಿಸಿದ್ದಾರೆ. ಇದರಲ್ಲಿ ಒಬ್ಬ ಆರೋಪಿ ಆಂಧ್ರದವನಾಗಿದ್ದು, ಮೂವರು ಬಳ್ಳಾರಿಯ ಕೌಲ್ ಬಜಾರ್ ನಿವಾಸಿಯಾಗಿದ್ದಾರೆಂದು ಹೆಚ್ಚುವರಿ ಎಸ್ಪಿ ಗುರು ಮೂತ್ತೂರು ಅವರು ಮಾಹಿತಿ ನೀಡಿದ್ದಾರೆ.