ಬಳ್ಳಾರಿ: ಜಿಲ್ಲೆಯ ಸಿರುಗುಪ್ಪ ತಾಲೂಕಿನ ಕೆ.ಸೂಗೂರು ಗ್ರಾಮ ಸಮೀಪದ ಬೆಂಚಿ ಕ್ಯಾಂಪಿನ ಮೀನು ಸಾಕಾಣಿಕೆ ಕೆರೆಯಲ್ಲಿ ಮೂವರು ಯುವಕರು ಮುಳುಗಿ ಮೃತಪಟ್ಟಿರುವ ಘಟನೆ ಇಂದು ಸಂಜೆ ನಡೆದಿದೆ.
ಸಿರುಗುಪ್ಪ ತಾಲೂಕಿನ ಟಿ.ರಾಂಪುರ ಗ್ರಾಮದ ಆರ್.ಜೆ ರಾಜಗೌಡ (40), ಕೆ.ಸೂಗೂರು ಗ್ರಾಮದ ಯೋಗೇಶ್ಗೌಡ (32), ಸಿರುಗುಪ್ಪ ನಗರದ ನಿವಾಸಿ ಸುರೇಶ (30) ಮೃತರು.
ಇಂದು ಮಧ್ಯಾಹ್ನದ ವೇಳೆ ಐವರು ಯುವಕರ ತಂಡ ಈ ಕೆರೆಯ ಬಳಿ ಊಟಕ್ಕೆಂದು ತೆರಳಿದ್ದು, ನಂತರ ಸಂಜೆ ನಾಲ್ಕರ ಸಮಯದಲ್ಲಿ ಕೆರೆಯಲ್ಲಿ ಮೀನಿಗೆ ಆಹಾರ ಹಾಕುವ ಹರಗೋಲು ಬುಟ್ಟಿಯಲ್ಲಿ ನಾಲ್ವರು ತೆರಳಿದ್ದಾರೆ. ಆಗ ಇದ್ದಕ್ಕಿದ್ದಂತೆ ಬುಟ್ಟಿ ಮಗುಚಿ ಬಿದ್ದಿದ್ದರಿಂದ ಅದರಲ್ಲಿದ್ದ ನಾಲ್ವರು ನೀರಿನಲ್ಲಿ ಮುಳುಗಿದ್ದಾರೆ ಎನ್ನಲಾಗಿದೆ.
ಈ ಪೈಕಿ ಬಸವ ಎಂಬ ಯುವಕ ಈಜಿ ಪಾರಾಗಿದ್ದಾನೆ. ಮತ್ತೊಬ್ಬ ಯುವಕ ಮೂಕಯ್ಯಸ್ವಾಮಿ ಕೆರೆಗೆ ಇಳಿಯದೆ ಘಟನೆಯನ್ನು ನೋಡಿ ಗ್ರಾಮಸ್ಥರಿಗೆ ತಿಳಿಸಿದ್ದಾನೆ.
ತಕ್ಷಣ ಪೊಲೀಸರು ಮತ್ತು ಅಗ್ನಿಶಾಮಕ ದಳದವರು ಘಟನಾ ಸ್ಥಳಕ್ಕೆ ಬಂದು ಯುವಕರ ಪತ್ತೆಗಾಗಿ ಕಾರ್ಯಾಚರಣೆ ನಡೆಸಿದ್ದಾರೆ. ಆದರೆ ತಡರಾತ್ರಿ 8 ಗಂಟೆವರೆಗೂ ಸಹ ಮೃತದೇಹಗಳು ಪತ್ತೆಯಾಗಿಲ್ಲ ಎಂದು ಪೊಲೀಸರು ತಿಳಿಸಿದ್ದಾರೆ.
ಘಟನಾ ಸ್ಥಳದಲ್ಲಿ ತಹಶೀಲ್ದಾರ್ ಎಸ್.ಬಿ. ಕೂಡಲಗಿ, ಸಿಪಿಐ ಟಿ.ಆರ್.ಪವಾರ್, ಪಿಎಸ್‍ಐ ಕೆ.ರಂಗಯ್ಯ ಹಾಗೂ ಅಗ್ನಿ ಶಾಮಕ ಠಾಣೆಯ ಸಿಬ್ಬಂದಿ ಸೇರಿದಂತೆ ಇತರರಿದ್ದರು.
ಓದಿ: ಸಿಎಂ ಸತತ ಸಭೆ ಸಫಲ : ಭುವನೇಶ್ವರದಿಂದ ರಾಜ್ಯಕ್ಕೆ 30 ಮೆಟ್ರಿಕ್ ಟನ್ ಆಮ್ಲಜನಕ