ಚಿಕ್ಕೋಡಿ (ಬೆಳಗಾವಿ): ಕೃಷಿಯಲ್ಲಿ ಆದಾಯ ಇಲ್ಲವೆಂದು ಮೂಗು ಮುರಿಯುವ ಜನರ ಮಧ್ಯೆ ಇಬ್ಬರು ಯುವಕರು ಬಂಜರು ಭೂಮಿಯಲ್ಲಿ ಚಿನ್ನದಂತಹ ಬೆಳೆ ಬೆಳೆದಿದ್ದಾರೆ. ಜಿಲ್ಲೆಯ ಅಥಣಿ ತಾಲೂಕಿನ ಸಂಬರಗಿ ಗ್ರಾಮದ ಕಂಟೆಕರ ಸಹೋದರರು ಅರ್ಧ ಎಕರೆ ಪ್ರದೇಶದಲ್ಲಿ ಸ್ಟ್ರಾಬೆರಿ ಬೆಳೆದು ಲಾಭದಾಯಕ ಕೃಷಿ ಕಂಡುಕೊಂಡು ಯುವಜನತೆಗೆ ಪ್ರೇರಣೆಯಾಗಿದ್ದಾರೆ.
ಕೇವಲ ಅರ್ಧ ಎಕರೆ ಪ್ರದೇಶದಲ್ಲಿ ಸ್ಟ್ರಾಬೆರಿ ಬೆಳೆದು ದಿನನಿತ್ಯ ಸಾವಿರಾರು ರೂಪಾಯಿ ಹಣ್ಣುಗಳನ್ನು ಮಾರಾಟ ಮಾಡುತ್ತಿದ್ದಾರೆ. ಒಂದು ದಿನ ಬಿಟ್ಟು ಒಂದು ದಿನಕ್ಕೆ 150 ರಿಂದ 200 ಕೆಜಿ ಹಣ್ಣುಗಳನ್ನು ಸಂಗ್ರಹಿಸಿ ಬೆಳಗಾವಿ ನಗರದ ಮಾರುಕಟ್ಟೆಗೆ ಕಳುಹಿಸಿ ಲಕ್ಷಾಂತರ ಆದಾಯವನ್ನು ಪಡೆಯುತ್ತಿದ್ದಾರೆ. ಒಂದು ಕೆಜಿ ಸ್ಟ್ರಾಬೆರಿ 130 ರಿಂದ 150 ರೂಪಾಯಿವರೆಗೆ ಮಾರುಕಟ್ಟೆಯಲ್ಲಿ ದರ ದೊರೆತು ಕೃಷಿಯಲ್ಲಿ ಲಾಭದಾಯಕ ಉದ್ಯೋಗ ಕಂಡುಕೊಂಡಿದ್ದಾರೆ.
ಈ ಬಗ್ಗೆ ಸ್ಟ್ರಾಬೆರಿ ಬೆಳೆದ ರೈತ ಅಂಕುಶ್ ಕಂಟೆಕರ ಮಾತನಾಡಿ, 'ನಮ್ಮ ಹಿರಿಯರ ಆಶೀರ್ವಾದದಿಂದ ಜಮೀನು ಹೊಂದಿದ್ದೇವೆ. ಸಾಂಪ್ರದಾಯಿಕ ಕೃಷಿ ಜೊತೆಗೆ ವಿಭಿನ್ನ ಕೃಷಿ ಅಳವಡಿಕೆಯಾಗಿ ನಾವು ಪ್ರಯತ್ನಪಟ್ಟು ಸ್ಟ್ರಾಬೆರಿ ಬೆಳೆದು ಯಶಸ್ವಿ ಕಂಡುಕೊಂಡಿದ್ದೇವೆ. ಉದ್ಯೋಗ ಅರಸಿಕೊಂಡು ನಗರದತ್ತ ಮುಖ ಮಾಡುವ ಬದಲು ನಮ್ಮ ತೋಟದಲ್ಲಿ ಈ ರೀತಿ ಬೆಳೆಯನ್ನು ಬೆಳೆಯುವುದು ಉತ್ತಮ. ಜೊತೆಗೆ ಸರ್ಕಾರ ರೈತರಿಗೆ ಸರಿಯಾಗಿ ನೀರು, ವಿದ್ಯುತ್ ಹಾಗೂ ಸಮೀಪದಲ್ಲಿ ಮಾರುಕಟ್ಟೆ ವ್ಯವಸ್ಥೆ ಮಾಡಿ ಕೊಟ್ಟಲ್ಲಿ ರೈತರಿಗೆ ಮತ್ತಷ್ಟು ಅನುಕೂಲವಾಗುತ್ತದೆ' ಎಂದರು.
ಇದನ್ನೂ ಓದಿ: ಗಿರ್ ತಳಿಯ ಹಸು ಸಾಕಿ ಯಶಸ್ವಿಯಾದ ದಾವಣಗೆರೆ ರೈತ.. ತಿಂಗಳಿಗೆ ಲಕ್ಷಕ್ಕೂ ಅಧಿಕ ಸಂಪಾದನೆ
ಉತ್ತರ ಕರ್ನಾಟಕ ಭಾಗದಲ್ಲಿ ಸ್ಟ್ರಾಬೆರಿ ಬೆಳೆ ಅಪರೂಪ: ಸ್ಟ್ರಾಬೆರಿ ಬೆಳೆಯುವುದಕ್ಕೆ ಪ್ರತಿಕೂಲದ ವಾತಾವರಣ ಬೇಕು. ಅತಿ ತಂಪಾದ ವಾತಾವರಣ ಇದ್ದಲ್ಲಿ ಮಾತ್ರ ಸ್ಟ್ರಾಬೆರಿ ಬೆಳೆಯುವುದಕ್ಕೆ ಸಾಧ್ಯ. ಈ ಬೆಳೆಯನ್ನು ಹೆಚ್ಚಾಗಿ ಮಹಾರಾಷ್ಟ್ರದ ಮಹಾಬಲೇಶ್ವರ ಪ್ರದೇಶದಲ್ಲಿ ಬೆಳೆಯುತ್ತಾರೆ. ತಾಪಮಾನ ಏರಿಕೆಯಿಂದ ಸ್ಟ್ರಾಬೆರಿ ಬೆಳೆಯಲ್ಲಿ ಕುಂಟಿತವಾಗುವುದರಿಂದ ಅದಕ್ಕೆ ಪ್ರತಿಕೂಲ ವಾತಾವರಣ ಅಗತ್ಯ. ಆದರೆ ಚಿಕ್ಕೋಡಿ ಶೈಕ್ಷಣಿಕ ಜಿಲ್ಲೆಯಲ್ಲಿ ಇಬ್ಬರು ಸಹೋದರರು ಪ್ರಥಮ ಬಾರಿಗೆ ಸ್ಟ್ರಾಬೆರಿ ಬೆಳೆದು ಕೃಷಿಯಲ್ಲಿ ಲಾಭದಾಯಕ ಕಂಡುಕೊಂಡಿದ್ದಾರೆ.
ಅಕ್ಕ ಪಕ್ಕದ ರೈತರಿಂದ ಸ್ಟ್ರಾಬೆರಿ ಬೆಳೆ ವೀಕ್ಷಣೆ: ಅಥಣಿ ತಾಲೂಕಿನ ಸಂಬರಗಿ ಗ್ರಾಮವು ನೀರಾವರಿ ವಂಚಿತ ಹಾಗೂ ಒಣ ಬೇಸಾಯ ಹೊಂದಿರುವ ಪ್ರದೇಶ. ಇಲ್ಲಿ ಸ್ಟ್ರಾಬೆರಿ ಬೆಳೆಯುವುದು ನಿಜಕ್ಕೂ ಸುಲಭವಲ್ಲ. ಆದರೆ ಅರ್ಧ ಎಕರೆಯಲ್ಲಿ ಸ್ಟ್ರಾಬೆರಿ ಬೆಳೆದು ಸಾವಯುವ ಕೃಷಿ ಜೊತೆಗೆ ಹನಿ ನೀರಾವರಿಯನ್ನು ಅಳವಡಿಸಿಕೊಂಡು ತೋಟವನ್ನು ನಿರ್ಮಿಸುವುದರ ಜೊತೆಗೆ ಲಾಭದಾಯಕ ಬೆಳೆಯನ್ನು ಯುವಕರು ಬೆಳೆದಿದ್ದಾರೆ. ಹೀಗಾಗಿ ಅಥಣಿ ಕಾಗವಾಡ ಗಡಿ ಹೊಂದಿರುವ ಮಹಾರಾಷ್ಟ್ರದ ಕೆಲವು ಜತ್ ತಾಲೂಕಿನ ರೈತರು ಸ್ಟ್ರಾಬೆರಿ ಬೆಳೆ ವೀಕ್ಷಿಸಲು ಇಲ್ಲಿಗೆ ಬರುತ್ತಾರೆ. ಜೊತೆಗೆ ಬೆಳೆಯ ಬಗ್ಗೆ ಹೆಚ್ಚಿನ ಮಾಹಿತಿಯನ್ನು ಇವರಿಂದಲೇ ಪಡೆದುಕೊಳ್ಳುತ್ತಾರೆ.
ಯುವಕರ ಸಾಧನೆಗೆ ಪ್ರಶಂಸೆ: 'ಒಣ ಬೇಸಾಯ ಪ್ರದೇಶದಲ್ಲಿ ಸ್ಟ್ರಾಬೆರಿ ಬೆಳೆಯುವುದು ಅಪರೂಪ. ಇಬ್ಬರು ಯುವಕರು ಜೊತೆಯಾಗಿ ನಿಂತು ನಿರಂತರ ಶ್ರಮದಿಂದ ಈ ಭಾಗದಲ್ಲಿ ಸ್ಟ್ರಾಬೆರಿ ಬೆಳೆದು ಇತರ ರೈತರಿಗೆ ಮಾದರಿಯಾಗಿದ್ದಾರೆ. ಮತ್ತು ಈ ಪ್ರದೇಶದಲ್ಲಿ ಮೊದಲಿಗೆ ಸ್ಟ್ರಾಬೆರಿ ಬೆಳೆದು ಲಾಭದಾಯಕ ಕಂಡುಕೊಂಡಿದ್ದಾರೆ' ಎಂದು ಅಥಣಿ ತೋಟಗಾರಿಕೆ ಇಲಾಖೆ ಅಧಿಕಾರಿ ಶ್ವೇತಾ ಹಾಡಕರ್ ಯುವಕರ ಕಾರ್ಯಕ್ಕೆ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.
ಇದನ್ನೂ ಓದಿ: ಹಾವೇರಿ: ಬಟನ್ ರೋಜ್ ಬೆಳೆದು ತಿಂಗಳಿಗೆ ಲಕ್ಷಾಂತರ ರೂ ಲಾಭ ಗಳಿಸುತ್ತಿರುವ ಮಾದರಿ ರೈತ