ಅಥಣಿ(ಬೆಳಗಾವಿ): ತಾಲೂಕಿನ ವಿವಿಧ ಗ್ರಾಮಗಳಲ್ಲಿ ಕೃಷಿಗೆ ಸಂಬಂಧಿಸಿದ ನೀರಿನ ಮೋಟಾರ್ ಸೇರಿದಂತೆ ಕೆಲ ಉಪಕರಣಗಳನ್ನು ಕಳ್ಳತನ ಮಾಡುತ್ತಿದ್ದ ಎಂದು ಆರೋಪಿಸಿ, ಓರ್ವ ಯುವಕನನ್ನು ಗ್ರಾಮಸ್ಥರು ಸೆರೆ ಹಿಡಿದು ಕೈ-ಕಾಲು ಕಟ್ಟಿ ಹಾಕಿ ಧರ್ಮದೇಟು ನೀಡಿರುವ ಘಟನೆ ತಾಲೂಕಿನ ಮುರುಗುಂಡಿ ಗ್ರಾಮದಲ್ಲಿ ನಡೆದಿದೆ.
ಆರೋಪಿಯನ್ನು ಅಥಣಿ ಪಟ್ಟಣದ ಸ್ಥಳೀಯ ನಿವಾಸಿ ರವಿ ಎಂದು ಗುರುತಿಸಲಾಗಿದೆ. ತಾಲೂಕಿನ ವಿವಿಧ ಗ್ರಾಮಗಳಲ್ಲಿ ಕೃಷಿಗೆ ಸಂಬಂಧಿಸಿದ ವಿದ್ಯುತ್ ಮೋಟಾರ್ ಕಳ್ಳತನ ಮಾಡುವ ಗ್ಯಾಂಗ್ನ ಓರ್ವನನ್ನು ಗ್ರಾಮಸ್ಥರು ಸೆರೆ ಹಿಡಿದು ಪೊಲೀಸರಿಗೆ ಒಪ್ಪಿಸಿದ್ದಾರೆ.
ಇದನ್ನೂ ಓದಿ: ಬಯಲಾಯ್ತು ಬೇಬಿ ಟ್ಯಾಂಕರ್ ಬ್ರಹ್ಮಾಂಡ: ಆಯಿಲ್ ಮಾಫಿಯಾಗೆ ಪೊಲೀಸಪ್ಪನೇ ಕಿಂಗ್ಪಿನ್!
ಮೂರು ಜನರ ತಂಡವೊಂದು ಹಳ್ಳ ಹಾಗೂ ನದಿ, ಬಾವಿ ಬಳಿ ನೀರಾವರಿ ವಿದ್ಯುತ್ ಮೋಟಾರ್ ಗುರುತಿಸಿ ಯಾರೂ ಇಲ್ಲದ ಸಮಯದಲ್ಲಿ ದೋಚಿಕೊಂಡು ಬಂದು ಪಟ್ಟಣದ ಗುಜರಿ ಅಂಗಡಿಗಳಿಗೆ ಮಾರುತ್ತಿದ್ದರು ಎಂದು ತಿಳಿದು ಬಂದಿದೆ. ಈ ಕಳ್ಳತನ ಪ್ರಕರಣಗಳಿಂದ ತಾಲೂಕಿನ ರೈತರು ರೋಸಿ ಹೋಗಿದ್ದರು.
ಸದ್ಯ ಓರ್ವನಿಗೆ ಧರ್ಮದೇಟು ನೀಡಿದ್ದು, ಸ್ಥಳಕ್ಕೆ ಅಥಣಿ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.