ಅಥಣಿ (ಬೆಳಗಾವಿ): ತಾಲೂಕಿನಲ್ಲಿ ಕೊರೊನಾ ವೈರಸ್ ಅಬ್ಬರ ಜೋರಾಗಿದ್ದು, ಕಳೆದ ಹದಿನೈದು ದಿನಗಳಿಂದ ಪಟ್ಟಣವನ್ನು ಲಾಕ್ಡೌನ್ ಮಾಡಲಾಗಿದೆ. ಹೀಗಾಗಿ, ದುಡಿಯುವ ಕೈಗಳಿಗೆ ಕೆಲಸವಿಲ್ಲದೇ ಪರದಾಡುವ ಸ್ಥಿತಿ ನಿರ್ಮಾಣವಾಗಿದ್ದು, ಆದಷ್ಟು ಬೇಗ ಲಾಕ್ಡೌನ್ ತೆರವು ಮಾಡಿ ಎಂದು ಸ್ಥಳೀಯರು ಆಗ್ರಹಿಸಿದ್ದಾರೆ.
ಅಥಣಿ ತಾಲೂಕಿನಲ್ಲಿ ಕೊರೊನಾ ವೇಗ ಹೆಚ್ಚಾಗಿರುವುದು ಆತಂಕಕ್ಕೆ ಕಾರಣವಾಗಿದ್ದು, ರಾಜ್ಯ ಸರ್ಕಾರ ಎಚ್ಚೆತ್ತುಕೊಂಡು ಕಳೆದ 15 ರಿಂದ ಜೂಲೈ 22ರವರೆಗೆ ಒಂದು ವಾರಗಳ ಮಟ್ಟಿಗೆ ಸರ್ಕಾರಿ ಮಟ್ಟದ ಲಾಕ್ಡೌನ್ ಜಾರಿ ಮಾಡಲಾಗಿದೆ. ಹಾಗೂ ಸ್ವಯಂ ಘೋಷಿತವಾಗಿ ಅಥಣಿ ಪಟ್ಟಣ ಕಳೆದ 10ರಿಂದ ಸಂಪೂರ್ಣ ಸ್ಥಬ್ದವಾಗಿದೆ. ಇದರಿಂದ ಕೆಲವು ಕಾರ್ಮಿಕರು ಕೈ ಕಟ್ಟಿ ಕೂರುವ ಪರಿಸ್ಥಿತಿ ನಿರ್ಮಾಣವಾಗಿದ್ದು, ಜೀವನ ನಡೆಸುವುದು ಕಷ್ಟ ಆಗಿದೆ ಅಂತಾರೆ ಸ್ಥಳೀಯ ಇರ್ಫಾನ್ ಭಾಗವಾನ್.
ತಾಲೂಕಿನಲ್ಲಿ 200 ಹೆಚ್ಚು ಕೊರೊನಾ ಪ್ರಕರಣಗಳು ದಾಖಲಾಗಿವೆ. ಇದರಲ್ಲಿ 12 ಕ್ಕೂ ಹೆಚ್ಚು ಸಾವು ಸಂಭವಿಸಿದೆ. ಗ್ರಾಮೀಣ ಭಾಗದಲ್ಲಿ ಕೊರೊನಾ ಹಬ್ಬಿದ್ದರಿಂದ ಜಿಲ್ಲಾಡಳಿತ ಯಾವ ರೀತಿ ಹತೋಟಿಗೆ ತರುತ್ತದೆ ಎಂಬುದು ಕಾದು ನೋಡಬೇಕಿದೆ.