ಬೆಳಗಾವಿ : ಉದ್ಯೋಗ ಖಾತ್ರಿ ಯೋಜನೆಯಡಿ ಸುಡು ಬಿಸಿಲಿನಲ್ಲಿ ಕೆಲಸ ಮಾಡುತ್ತಿದ್ದ ಮಹಿಳಾ ಕಾರ್ಮಿಕರನ್ನು ಶಾಸಕಿ ಲಕ್ಷ್ಮಿ ಹೆಬ್ಬಾಳ್ಕರ್ ಭೇಟಿಯಾಗಿ ಅವರ ಸಂಕಷ್ಟ ಆಲಿಸಿದರು.
ಬೆಳಗಾವಿ ತಾಲೂಕಿನ ಬಿ ಕೆ ಕಂಗ್ರಾಳಿ ಗ್ರಾಮ ಪಂಚಾಯತ್ ವ್ಯಾಪ್ತಿಯಲ್ಲಿ ಉದ್ಯೋಗ ಖಾತ್ರಿಯಡಿ ಸುಮಾರು 400ಕ್ಕೂ ಹೆಚ್ಚು ಮಹಿಳೆಯರು ಕೆಲಸ ಮಾಡುತ್ತಿದ್ದಾರೆ. ಕೆಲಸದ ಸ್ಥಳಕ್ಕೆ ತೆರಳಿದ ಲಕ್ಷ್ಮಿ ಹೆಬ್ಬಾಳಕರ್, ಮಹಿಳೆಯರ ಆರೋಗ್ಯ ಮತ್ತು ಕುಂದುಕೊರತೆಗಳ ಬಗ್ಗೆ ವಿಚಾರಿಸಿದರು.
ಅವರೊಂದಿಗೆ ಸುದೀರ್ಘ ಸಮಯ ಕಳೆದ ಹೆಬ್ಬಾಳ್ಕರ್, ಕೆಲಸ ಮಾಡುವ ಸಂದರ್ಭದಲ್ಲಿ ಆಗುತ್ತಿರುವ ಸಮಸ್ಯೆಗಳನ್ನು ವಿಚಾರಿಸಿದರು. ತಕ್ಷಣ ಅಧಿಕಾರಿಗಳನ್ನು ಸಂಪರ್ಕಿಸಿ ಸಮಸ್ಯೆಗಳ ನಿವಾರಣೆಗೆ ಕ್ರಮ ಕೈಗೊಳ್ಳುವಂತೆ ಸೂಚಿಸಿದರು.
ಓದಿ:ಮರಾಠಿ ಶಾಲೆ ಮಕ್ಕಳಿಗೆ ಕರುನಾಡಗೀತೆ ಗಟ್ಟಿಯಾಗಿ ಹಾಡಲು ಹೇಳಿದ ಶಿಕ್ಷಣ ಸಚಿವರು
ಮಹಿಳೆ ಅಬಲೆಯಲ್ಲ, ಸಬಲೆ. ಇಂತಹ ಕಠಿಣ ಕೆಲಸಗಳ ಮೂಲಕ ಇಡೀ ಕುಟುಂಬದ ಜೀವನಾಧಾರವಾಗಿರುವ ಮಹಿಳೆಯರು, ಇಡೀ ಸಮಾಜಕ್ಕೆ ಆದರ್ಶಪ್ರಾಯರಾಗಿ ನಿಲ್ಲುತ್ತಾರೆ ಎಂದು ಹೆಬ್ಬಾಳ್ಕರ್ ಹೇಳಿದರು. ನಿಮ್ಮ ಸಮಸ್ಯೆಗಳನ್ನು ನಿವಾರಿಸಿದ ತೃಪ್ತಿ ನನಗಿದೆ. ನಿಮ್ಮ ಬದುಕಿನ ಕಷ್ಟಗಳು, ಆದಷ್ಟು ಬೇಗ ನಿವಾರಣೆಯಾಗಲಿ ಎಂದು ಹೆಬ್ಬಾಳ್ಕರ್ ಪ್ರತಿಕ್ರಿಯಿಸಿದರು.