ಕಾರವಾರ: ಹೆದ್ದಾರಿ ಕಾಮಗಾರಿ ವೇಳೆ ತೆರೆದಿದ್ದ ಗುಂಡಿಗೆ ಬಿದ್ದು ಗಾಯಗೊಂಡಿದ್ದ ಮಹಿಳೆ ಚಿಕಿತ್ಸೆ ಫಲಕಾರಿಯಾಗದೆ ಸಾವನ್ನಪ್ಪಿರುವ ಘಟನೆ ಹೊನ್ನಾವರ ತಾಲೂಕಿನ ಹಳದೀಪುರದಲ್ಲಿ ನಡೆದಿದೆ.
ಹಳದೀಪುರದ ಬಡ್ನಿಕೇರಿಯ ಲಕ್ಷ್ಮಿ ಕಣಿಯ ಮುಕ್ರಿ (35) ಮೃತಪಟ್ಟ ಮಹಿಳೆ. ಐಆರ್ಬಿ ಕಂಪನಿಯ ಹೆದ್ದಾರಿ ಅಗಲೀಕರಣದ ವೇಳೆ ಚರಂಡಿ ನಿರ್ಮಾಣಕ್ಕಾಗಿ ಗುಂಡಿಯನ್ನು ತೆರೆಯಲಾಗಿತ್ತು. ಆದರೆ ರಸ್ತೆ ಪಕ್ಕದಲ್ಲಿ ಸಾರ್ವಜನಿಕರು ಓಡಾಡುವಂತಿದ್ದರು ಯಾವುದೇ ಸುರಕ್ಷತಾ ಕ್ರಮ ಕೈಗೊಳ್ಳದೆ ಗುಂಡಿಯನ್ನು ಹಾಗೆ ಬಿಟ್ಟು ನಿರ್ಲಕ್ಷ್ಯ ತಾಳಿದ್ದರು.
ಆದರೆ ಶನಿವಾರ ರಾತ್ರಿ ಸುಮಾರು 8 ಗಂಟೆಗೆ ಅದೇ ಹೊಂಡಕ್ಕೆ ಬಿದ್ದದ್ದ ಲಕ್ಷ್ಮಿ ಗಂಭೀರ ಗಾಯಗೊಂಡಿದ್ದರು. ತಕ್ಷಣ ಅವರಿಗೆ ಮಂಗಳೂರಿನ ಖಾಸಗಿ ಆಸ್ಪತ್ರೆಯ ತುರ್ತು ನಿಗಾ ಘಟಕದಲ್ಲಿ ಚಿಕಿತ್ಸೆ ನೀಡಲಾಗಿತ್ತು. ಆದರೆ ಚಿಕಿತ್ಸೆ ಫಲಕಾರಿಯಾಗದೆ ಇಂದು ಮಹಿಳೆ ಕೊನೆಯುಸಿರೆಳೆದಿದ್ದಾಳೆ. ಮಹಿಳೆ ಸಾವಿಗೆ ಸ್ಥಳೀಯರು ಆಕ್ರೋಶ ವ್ಯಕ್ತಪಡಿಸಿದ್ದು, ಐಆರ್ಬಿ ಕಂಪನಿಯೇ ಕಾರಣ ಎಂದು ದೂರಿದ್ದಾರೆ.
ಈ ಬಗ್ಗೆ ಹೊನ್ನಾವರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ಮುಂದಿನ ಕ್ರಮ ಕೈಗೊಂಡಿದ್ದಾರೆ.