ಬೆಳಗಾವಿ: ತಾಲೂಕಿನ ಸಾಂಬ್ರಾ ವಿಮಾನ ನಿಲ್ದಾಣದಲ್ಲಿ ಕಾರ್ಯನಿರ್ವಹಿಸುತ್ತಿದ್ದ ಕರ್ನಾಟಕ ಕೈಗಾರಿಕಾ ಭದ್ರತಾ ಪಡೆಯ ಮಹಿಳಾ ಕಾನ್ಸ್ಟೇಬಲ್ ಪತಿಯ ಕಿರುಕುಳಕ್ಕೆ ಬೇಸತ್ತು ನೇಣಿಗೆ ಶರಣಾಗಿದ್ದಾರೆ.
ಜಿಲ್ಲೆಯ ರಾಮದುರ್ಗ ತಾಲೂಕಿನ ಹಂಪಿಹೊಳಿ ಗ್ರಾಮದ ಸುಜಾತಾ ಬಸಪ್ಪ ಕರೆನ್ನವರ (29) ಮೃತ ದುರ್ದೈವಿ. ಈಕೆ 2014ರಲ್ಲಿ ಮಹಿಳಾ ಕಾನ್ಸ್ಟೇಬಲ್ ಆಗಿ ಸಾಂಬ್ರಾ ವಿಮಾನ ನಿಲ್ದಾಣದಲ್ಲಿ ಸರ್ಕಾರಿ ಸೇವೆ ಆರಂಭಿಸಿದ್ದರು. ಇತ್ತ ಪತಿ ಹಣುಮಂತಗೌಡ ಪಾಟೀಲ್ ಪಂತ್‍ನಗರದಲ್ಲಿರುವ ಖಾಸಗಿ ಶಾಲಾ ಶಿಕ್ಷಕರಾಗಿ ಕಾರ್ಯನಿರ್ವಹಿಸುತ್ತಿದ್ದು, ಸಾಂಬ್ರಾ ಗ್ರಾಮದಲ್ಲಿ ನೆಲೆಸಿದ್ದರು.
ಆದ್ರೆ, ದಿನ ಕಳೆದಂತೆ ಇಬ್ಬರ ನಡುವೆ ಮನಸ್ತಾಪ ಉಂಟಾಗಿದೆ ಎನ್ನಲಾಗಿದೆ. ಇದರಿಂದ ಪತಿಯ ಪ್ರತಿ ದಿನದ ಕಿರುಕುಳಕ್ಕೆ ಬೇಸತ್ತು ಸಾಂಬ್ರಾದಲ್ಲಿರುವ ಮನೆಯಲ್ಲಿ ನೇಣು ಹಾಕಿಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎನ್ನುವ ಆರೋಪ ಕೇಳಿ ಬಂದಿದೆ. ಮೃತ ಮಹಿಳೆಯ ಪತಿ ವಿರುದ್ಧ 306 ಮತ್ತು 498ಎ ಐಪಿಸಿ ಸೆಕ್ಷನ್ ಅಡಿಯಲ್ಲಿ ಮಾರಿಹಾಳ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.