ಬೆಳಗಾವಿ : ಗುತ್ತಿಗೆದಾರ ಸಂತೋಷ್ ಪಾಟೀಲ್ ಆತ್ಮಹತ್ಯೆ ಪ್ರಕರಣದಿಂದ ಎಚ್ಚೆತ್ತುಕೊಂಡಿರುವ ಸಚಿವ ಗೋವಿಂದ ಕಾರಜೋಳ, ಅಧಿಕಾರಿಗಳಿಗೆ ವಾರ್ನಿಂಗ್ ನೀಡಿದ್ದಾರೆ. ವರ್ಕ್ ಆರ್ಡರ್ ಇಲ್ಲದೇ ಕೆಲಸ ನಡೆಯುತ್ತಿದ್ದರೇ, ಅಂತಹ ಕೆಲಸಗಳನ್ನು ಬಂದ್ ಮಾಡಿಸುವಂತೆ ತಾಕೀತು ಮಾಡಿದ್ದಾರೆ. ಸರ್ಕಾರದ ಯೋಜನೆ ಮಂಜೂರಾಗದ ಹೊರತು, ಯಾರಾದರೂ ಕಾಮಗಾರಿ ಮಾಡೋದು ಗಮನಕ್ಕೆ ಬಂದ್ರೆ ಪಿಡಿಒ, ಇಒ, ಇಂಜಿನಿಯರ್‌ಗಳನ್ನೇ ಹೊಣೆ ಮಾಡಲಾಗುತ್ತದೆ ಎಂದು ಹೇಳಿದರು.
ಬೆಳಗಾವಿ ಜಿಲ್ಲಾ ಪ್ರಗತಿ ಪರಿಶೀಲನಾ ಸಭೆಯಲ್ಲಿ ಅಧಿಕಾರಿಗಳಿಗೆ ಸಚಿವ ಗೋವಿಂದ ಕಾರಜೋಳ ವಾರ್ನಿಂಗ್ ನೀಡಿದರು. ನಿಮ್ಮ ಮನೆಯಲ್ಲಿ ಯಾರಾದರೂ ಹೇಳದೇ ಕೆಲಸ ಮಾಡೋಕೆ ಬಂದ್ರೆ ಸುಮ್ಮನೇ ಇರ್ತೀರಾ?. ಯಾವುದೇ ಕಾರಣಕ್ಕೂ ಅನಧಿಕೃತ ವ್ಯಕ್ತಿಗಳು ನಮ್ಮ ವ್ಯಾಪ್ತಿಯಲ್ಲಿ ಬರಬಾರದು.
ಗ್ರಾಮ ಪಂಚಾಯತ್‌ನಲ್ಲಿ ಯಾರಾದರೂ ಬಂದು ಕೆಲಸ ಮಾಡ್ತಾರೆ ಅಂದ್ರೆ ಬಿಡಬಾರದು. ಒಂದು ವೇಳೆ ಬಿಟ್ಟಿದ್ದೆ ಆದ್ರೆ, ಸುಮ್ಮನೇ ಅಧಿಕಾರಿಗಳಿಗೂ ಕೆಟ್ಟ ಹೆಸರು, ಸರ್ಕಾರಕ್ಕೂ ಕೆಟ್ಟ ಹೆಸರು. ವಿನಾಕಾರಣ ಅಪಪ್ರಚಾರ ಆಗುತ್ತದೆ ಎಂದು ಪ್ರಗತಿ ಪರಿಶೀಲನಾ ಸಭೆಯಲ್ಲಿ ಅಧಿಕಾರಿಗಳಿಗೆ ಗೋವಿಂದ ಕಾರಜೋಳ ಸೂಚನೆ ನೀಡಿದ್ದಾರೆ.
ಜಿಲ್ಲಾ ಪ್ರಗತಿ ಪರಿಶೀಲನಾ ಸಭೆ ಬಳಿಕ ಮಾಧ್ಯಮದವರೊಂದಿಗೆ ಮಾತನಾಡಿದ ಸಚಿವರು, ಗುತ್ತಿಗೆದಾರ ಸಂತೋಷ್ ಆತ್ಮಹತ್ಯೆ ಪ್ರಕರಣದಲ್ಲಿ ಅಧಿಕಾರಿಗಳ ನಿರ್ಲಕ್ಷ್ಯ ಅಂತೇನಿಲ್ಲ. ಈಗಾಗಲೇ ತನಿಖೆ ಆಗ್ತಿದೆ, ವರದಿ ಬರಬೇಕು. ತನಿಖೆ ಆಗದೇ ನಾನು ಮಂತ್ರಿಯಾಗಿ ಹೇಳಿದ್ರೆ, ಸರ್ಕಾರವೇ ಹೇಳಿದ ಹಾಗೆ ಆಗುತ್ತದೆ.
ತನಿಖೆಗೆ ಅಡ್ಡಿಪಡಿಸುವಂತೆ ಆಗಬಾರದು. ಹೀಗಾಗಿ, ನಾನು ಮಾತನಾಡುವುದಿಲ್ಲ. ವರ್ಕ್ ಆರ್ಡರ್ ಇಲ್ಲದೇ ಕೆಲಸ ಮಾಡುವಂತಿಲ್ಲ. ನಮ್ಮ ಕಾನೂನಿನಲ್ಲಿ ಇದಕ್ಕೆ ಅವಕಾಶ ಇಲ್ಲ. ಯಾವುದೇ ಕಾಮಗಾರಿ ಮಾಡಬೇಕಾದ್ರೆ ವರ್ಕ್ ಎಸ್ಟಿಮೇಟ್ ಮಾಡಬೇಕಾಗುತ್ತೆ ಎಂದರು.
ಇದನ್ನೂ ಓದಿ: ಪಿಎಸ್ಐ ನೇಮಕಾತಿ ಅಕ್ರಮ ಹಿನ್ನೆಲೆ, ಅಭ್ಯರ್ಥಿಗಳಿಗೆ ಮರುಪರೀಕ್ಷೆ: ಗೃಹ ಸಚಿವ ಆರಗ ಜ್ಞಾನೇಂದ್ರ