ಬೆಳಗಾವಿ: ಎರಡನೇ ದಿನದ ವೀಕೆಂಡ್ ಲಾಕ್ಡೌನ್ ಹಿನ್ನೆಲೆ ಕುಂದಾನಗರಿ ಜನ ಸಂಚಾರವಿಲ್ಲದೆ ಸ್ತಬ್ಧವಾಗಿದ್ದು, ಸ್ವತಃ ಡಿಸಿಪಿ ಡಾ. ವಿಕ್ರಮ್ ಆಮಟೆ ಫೀಲ್ಡ್ಗೆ ಇಳಿದು ಕಾರ್ಯಾಚರಣೆ ನಡೆಸುತ್ತಿದ್ದಾರೆ.
ಜಿಲ್ಲೆಯಲ್ಲಿ ಕೊರೊನಾ ಸೋಂಕಿತರ ಸಂಖ್ಯೆ ದಿನದಿಂದ ದಿನಕ್ಕೆ ಕೊಂಚ ಕಡಿಮೆ ಆಗುತ್ತಿದ್ದರೂ ಸೋಂಕಿತರ ಸಾವಿನ ಪ್ರಮಾಣ ಮಾತ್ರ ಹೆಚ್ಚಾಗುತ್ತಿದೆ. ಈ ಮೊದಲು ಆರೋಗ್ಯ ಇಲಾಖೆ ಬಿಡುಗಡೆ ಮಾಡುವ ಹೆಲ್ತ್ ಬುಲೆಟಿನ್ನಲ್ಲಿ 4ರಿಂದ 5ಕ್ಕೆ ಇದ್ದ ಕೊರೊನಾ ಸಾವಿನ ಸಂಖ್ಯೆ ಇದೀಗ 14ಕ್ಕೇರಿದೆ. ಹೀಗಾಗಿ ಜಿಲ್ಲಾಡಳಿತದ ಆದೇಶದಂತೆ ಮೂರು ದಿನಗಳ ಕಾಲ ಕಟ್ಟುನಿಟ್ಟಿನ ಲಾಕ್ಡೌನ್ಗೆ ಮುಂದಾಗಿರುವ ಪೊಲೀಸರು ಪ್ರತಿಯೊಂದು ವಾಹನಗಳನ್ನು ತಪಾಸಣೆ ನಡೆಸುತ್ತಿದ್ದಾರೆ. ಅನಗತ್ಯವಾಗಿ ರಸ್ತೆಗಿಳಿದ ಬೈಕ್ ಮತ್ತು ವಾಹನಗಳನ್ನು ಸೀಜ್ ಮಾಡುತ್ತಿದ್ದಾರೆ. ಹೀಗಾಗಿ ಜಿಲ್ಲೆಯಲ್ಲಿ ಅನಗತ್ಯವಾಗಿ ರಸ್ತೆಗಿಳಿಯುವವರ ಸಂಖ್ಯೆ ಕಡಿಮೆಯಾಗುತ್ತಿದೆ.
ಮೇ ಜಾರಕಿಹೊಳಿ ಆದ್ಮಿ ಸಾಬ್, ಛೋಡೋ ಎಂದವನಿಗೆ ದಂಡ:
ಬಾದಾಮಿಯಿಂದ ಖಾನಾಪುರಕ್ಕೆ ಹೊರಟ್ಟಿದ್ದ ಇನೋವಾ ಕಾರನ್ನು ಚೆನ್ನಮ್ಮ ವೃತ್ತದಲ್ಲಿ ಪೊಲೀಸರು ತಪಾಸಣೆ ಮಾಡಿದರು. ಈ ವೇಳೆ ಮೆಹಬೂಬ್ ಸೈಯದ್ ಎಂಬಾತ ನಾನು ಜಾರಕಿಹೊಳಿ ಕಡೆಯವನು ಬಿಡಿ ಸರ್.. ಸತೀಶ ಜಾರಕಿಹೊಳಿ ಅವರ ಕಾರ್ಮಿಕರನ್ನು ಕರೆದುಕೊಂಡು ಬಾದಾಮಿಗೆ ಬಿಡಲು ಹೋಗಿದ್ದೆ ಎಂದನು. ಆದ್ರೆ, ಇದ್ಯಾವದಕ್ಕೂ ಜಗ್ಗದ ಪೊಲೀಸರು, ದಾಖಲಾತಿ ಪರಿಶೀಲಿಸಿ 250 ರೂ.ಗಳ ದಂಡ ವಿಧಿಸಿ ಕಳುಹಿಸಿದರು.