ಬೆಳಗಾವಿ : ರಾಜ್ಯದಲ್ಲಿ ಅಭಿವೃದ್ಧಿ ಕೆಲಸಗಳು ಕುಂಠಿತಗೊಂಡರೂ ಸಹ ಪ್ರವಾಹ ಸಂತ್ರಸ್ತರಿಗೆ ನೀಡಬೇಕಾದ ಪರಿಹಾರ ನೀಡುತ್ತೇವೆಂದು ಸಿಎಂ ಬಿ.ಎಸ್ ಯಡಿಯೂರಪ್ಪ ಸ್ಪಷ್ಟಪಡಿಸಿದರು.
ಬೆಳಗಾವಿಯ ಸಾಂಬ್ರಾ ವಿಮಾನ ನಿಲ್ದಾಣದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಸಿಎಂ, ಅಭಿವೃದ್ಧಿ ಕೆಲಸಗಳು ನಿಂತರೂ ಪರವಾಗಿಲ್ಲ. ಆದರೆ, ಸಂತ್ರಸ್ತರಿಗೆ ಪರಿಹಾರ ನೀಡಲು ಸರ್ಕಾರ ಬದ್ಧವಾಗಿದೆ ಎಂದರು. ಪ್ರವಾಹ ಸಂತ್ರಸ್ತರಿಗೆ 10 ಸಾವಿರ ರೂ.ಚೆಕ್ ಆರಂಭಿಕ ಪರಿಹಾರವಾಗಿ ನೀಡಲಾಗಿದೆ. ಬೆಳಗಾವಿ ಜಿಲ್ಲೆಯ ಒಂದು ಲಕ್ಷದ ಹತ್ತು ಸಾವಿರ ಸಂತ್ರಸ್ತರಿಗೆ ಚೆಕ್ ಮುಟ್ಟಿಸಲಾಗಿದೆ. ಮಳೆಯಿಂದ ಹಾನಿಯಾದ ಮನೆಗಳ ಪೌಂಡೇಷನ್ ಹಾಕಿಕೊಡಲು ಒಂದು ಲಕ್ಷ ರೂ ತಕ್ಷಣ ಬಿಡುಗಡೆ ಮಾಡಲು ಡಿಸಿಗೆ ಸೂಚನೆ ನೀಡಿದ್ದೇವೆಂದು ಪ್ರತಿಕ್ರಿಯಿಸಿದರು.
ಪ್ರವಾಹ ಸಂದರ್ಭದಲ್ಲಿ ಸಾಕಷ್ಟು ಪ್ರಮಾಣದಲ್ಲಿ ರೈತರ ಬೆಳೆಗಳು ಹಾನಿಯಾಗಿದ್ದು, ಕೇಂದ್ರದಿಂದ ರೈತರಿಗೆ ಪರಿಹಾರ ಕೊಡಿಸುವ ಕೆಲಸ ಮಾಡಲಾಗುವುದು ಎಂದರು. ರಾಮದುರ್ಗ ತಾಲೂಕಿನ ಸುರೇಬಾನ್ ಗ್ರಾಮದ ಮೃತ ಬಾಲಕನ ಕುಟುಂಬಕ್ಕೆ 5 ಲಕ್ಷ ಪರಿಹಾರ ನೀಡಲಾಗುವುದು. ಬೆಳಗಾವಿಯಲ್ಲಿ ಮತ್ತೇ ಪ್ರವಾಹ ಬಂದಿರುವ ಕಾರಣ ದೆಹಲಿ ಪ್ರವಾಸ ರದ್ದು ಮಾಡಿ ಸಂತ್ರಸ್ತರ ಸಮಸ್ಯೆ ಆಲಿಸಲು ಬಂದಿದ್ದೇನೆಂದು ಸ್ಪಷ್ಟಪಡಿಸಿದರು. ಈ ವೇಳೆ ಉಪ ಮುಖ್ಯಮಂತ್ರಿ ಲಕ್ಷ್ಮಣ ಸವದಿ, ಗೃಹ ಸಚಿವ ಬಸವರಾಜ ಬೊಮ್ಮಾಯಿ, ಸಂಸದೆ ಶೋಭಾ ಕರಂದ್ಲಾಜೆ, ಶಾಸಕ ಅನಿಲ್ ಬೆನಕೆ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.