ಬೆಳಗಾವಿ: ಸವದತ್ತಿ ಅಷ್ಟೇ ಅಲ್ಲದೇ ಇಡೀ ಉತ್ತರ ಕರ್ನಾಟಕವನ್ನೇ ದತ್ತು ತೆಗೆದುಕೊಂಡು, ತಾರತಮ್ಯ ಸರಿಪಡಿಸುವುದೇ ನನ್ನ ಜೀವನದ ಗುರಿ ಎಂದು ಜೆಡಿಎಸ್ ನಾಯಕ ಹೆಚ್.ಡಿ.ಕುಮಾರಸ್ವಾಮಿ ಹೇಳಿದರು. ಸವದತ್ತಿ ಪಟ್ಟಣದಲ್ಲಿ ಜೆಡಿಎಸ್ ಪಂಚರತ್ನ ಸಮಾವೇಶದಲ್ಲಿ ಭಾಗಿಯಾಗಿ ಅಭ್ಯರ್ಥಿ ಸೌರವ ಚೋಪ್ರಾ ಪರ ಪ್ರಚಾರ ಸಭೆಯಲ್ಲಿ ಭಾಗಿಯಾದ ಬಳಿಕ ಮಾಧ್ಯಮಗಳ ಜೊತೆಗೆ ಮಾತನಾಡಿದ ಅವರು, ಬರೀ ಸವದತ್ತಿ ಒಂದೇ ನಾನು ಲೆಕ್ಕಕ್ಕೆ ಹಿಡಿಯುವುದಿಲ್ಲ. ಇಡೀ ಉತ್ತರ ಕರ್ನಾಟಕದ ಕಿತ್ತೂರು ಕರ್ನಾಟಕ, ಕಲ್ಯಾಣ ಕರ್ನಾಟಕ ಭಾಗದಲ್ಲಿ ಸಂಪೂರ್ಣ ಅಭಿವೃದ್ಧಿ ಮಾಡಲಿದ್ದೇವೆ ಎಂದರು.
ಹಳೆ ಕರ್ನಾಟಕ ಭಾಗದಲ್ಲಿ ನಾವು ಏನು ಪ್ರಾಮಾಣಿಕವಾಗಿ ಅಭಿವೃದ್ಧಿ ಮಾಡಿದ್ದೇವೋ, ಅದೇ ರೀತಿ ಉತ್ತರ ಕರ್ನಾಟಕ ಭಾಗದಲ್ಲಿ ಅಭಿವೃದ್ಧಿ, ಬಡತನ ನಿವಾರಿಸುವ ಸವಾಲು ಸ್ವೀಕರಿಸಿ ಹೋಗುತ್ತಿದ್ದೇನೆ. ಅದಕ್ಕೆ ಜನರ ಸಂಪೂರ್ಣ ವಿಶ್ವಾಸ ಪಡೆಯಲು ಬಂದಿದ್ದೇನೆ ಎಂದು ಹೇಳಿದರು.
ಬೆಳಗಾವಿ ಜಿಲ್ಲೆಯಲ್ಲಿ ಜೆಡಿಎಸ್ ಅಭ್ಯರ್ಥಿಗಳು ಗೆಲ್ಲುವ ವಾತಾವರಣ ನಿರ್ಮಾಣವಾಗಿದೆ. ಇನ್ನು ಎರಡ್ಮೂರು ಬಾರಿ ನಾನು ಬೆಳಗಾವಿಗೆ ಬರಲಿದ್ದೇನೆ. ಕಳೆದ ಬಾರಿ ಯಮಕನಮರಡಿ ಕ್ಷೇತದಿಂದ ಬಿಜೆಪಿ ಅಭ್ಯರ್ಥಿಯಾಗಿ ಸ್ಪರ್ಧಿಸಿ, ಕೇವಲ 2850 ಮತಗಳ ಅಂತರದಿಂದ ಸೋತಿದ್ದ ಮಾರುತಿ ಅಷ್ಟಾಗಿ ಈಗ ನಮ್ಮ ಪಕ್ಷಕ್ಕೆ ಬಂದಿದ್ದಾರೆ. ಬಿಜೆಪಿಯವರ ಮ್ಯಾಚ್ ಫಿಕ್ಸಿಂಗ್ನಿಂದ ನಾನು ಸೋಲು ಅನುಭವಿಸಬೇಕಾಯಿತು ಎಂದು ಅಷ್ಟಾಗಿ ಬಹಳ ನೋವಿನಿಂದ ಹೇಳಿಕೊಂಡಿದ್ದಾರೆ. ಹೀಗಾಗಿ ಅವರಿಗೆ ಎಲ್ಲ ರೀತಿ ಶಕ್ತಿ ತುಂಬುವ ಕೆಲಸ ಮಾಡಲಿದ್ದೇನೆ ಎಂದು ಹೇಳಿದರು.
ಪಕ್ಷ ತೊರೆದ ಅಭ್ಯರ್ಥಿಗಳಿಗೆ ಮಣೆ: ಜೆಡಿಎಸ್ 50 ಅಭ್ಯರ್ಥಿಗಳ 2ನೇ ಪಟ್ಟಿಯನ್ನು ಬಿಡುಗಡೆ ಮಾಡಿದೆ. ಹಾಸನ ಕ್ಷೇತ್ರದ ಟಿಕೆಟ್ ಘೋಷಿಸುವ ಮೂಲಕ ಟಿಕೆಟ್ ಕುತೂಹಲಕ್ಕೆ ತೆರೆ ಎಳೆಯಲಾಗಿದೆ. 2ನೇ ಟಿಕೆಟ್ ಪಟ್ಟಿಯಲ್ಲಿ ಬಿಜೆಪಿ, ಕಾಂಗ್ರೆಸ್ ಟಿಕೆಟ್ ಸಿಗದೇ ಪಕ್ಷ ತೊರೆದ ಅಭ್ಯರ್ಥಿಗಳಿಗೆ ಮಣೆ ಹಾಕಲಾಗಿದೆ.
ಇದನ್ನೂ ಓದಿ : ಬಿಜೆಪಿ 3ನೇ ಪಟ್ಟಿ ರಿಲೀಸ್: ಜಗದೀಶ್ ಶೆಟ್ಟರ್ ವಿರುದ್ಧ ಟೆಂಗಿನಕಾಯಿ; ಮಹದೇವಪುರಕ್ಕೆ ಮಂಜುಳಾ ಲಿಂಬಾವಳಿ
ರೆಬೆಲ್ ಅಭ್ಯರ್ಥಿಗಳಿಗೆ ಜೆಡಿಎಸ್ ಅವಕಾಶ: ಮೊದಲು 93 ಅಭ್ಯರ್ಥಿಗಳ ಪಟ್ಟಿ ಬಿಡುಗಡೆ ಮಾಡಿದ್ದ ಜೆಡಿಎಸ್ಗೆ ಹಾಸನ ಟಿಕೆಟ್ ಕಗ್ಗಂಟಾಗಿದ್ದರಿಂದ 2ನೇ ಪಟ್ಟಿ ಬಿಡುಗಡೆ ತಡವಾಗಿತ್ತು. ಇದೀಗ 50 ಅಭ್ಯರ್ಥಿಗಳ ಪಟ್ಟಿ ಬಿಡುಗಡೆ ಮಾಡುವ ಮೂಲಕ ಜೆಡಿಎಸ್ ಈವರೆಗೆ ಒಟ್ಟು 143 ಕ್ಷೇತ್ರಗಳಿಗೆ ಟಿಕೆಟ್ ಘೋಷಣೆ ಮಾಡಿದೆ. ಇನ್ನೂ 81 ಕ್ಷೇತ್ರಗಳ ಟಿಕೆಟ್ ಘೋಷಣೆ ಬಾಕಿ ಉಳಿಸಿಕೊಂಡಿದೆ. ಆದರೆ, ಶುಕ್ರವಾರ ಬಿಡುಗಡೆ ಮಾಡಿದ 2ನೇ ಪಟ್ಟಿಯಲ್ಲಿ ಜೆಡಿಎಸ್ ರಾಷ್ಟ್ರೀಯ ಪಕ್ಷದ ರೆಬೆಲ್ ಅಭ್ಯರ್ಥಿಗಳಿಗೆ ಮಣೆ ಹಾಕಿದೆ.
ಇದನ್ನೂ ಓದಿ: 2ನೇ ಪಟ್ಟಿಯಲ್ಲಿ ಅನ್ಯ ಪಕ್ಷದ ಅತೃಪ್ತರಿಗೆ ಜೆಡಿಎಸ್ ಮಣೆ: ಅಂತಿಮ ಪಟ್ಟಿಗೆ ವಲಸಿಗರತ್ತ ಚಿತ್ತ!