ಬೆಳಗಾವಿ: ಮುಖ್ಯಮಂತ್ರಿ ಬದಲಾವಣೆ, ಸಚಿವ ಸ್ಥಾನ ಹಂಚಿಕೆ ಇವೆಲ್ಲ ಆ ಪಕ್ಷದ ಆಂತರಿಕ ವಿಷಯಗಳು. ನಮ್ಮ ಆದ್ಯತೆ ಬಿಜೆಪಿ ಸರ್ಕಾರದ ವೈಫಲ್ಯಗಳನ್ನು ಎತ್ತಿ ತೋರಿಸುವುದು ಎಂದು ಕೆಪಿಸಿಸಿ ಕಾರ್ಯಾಧ್ಯಕ್ಷ ಸತೀಶ್ ಜಾರಕಿಹೊಳಿ ಹೇಳಿದರು.
ಕೆಪಿಸಿಸಿಗೆ ಹೊಸ ಅಧ್ಯಕ್ಷರ ಆಯ್ಕೆಯ ಬಳಿಕ ನಾವು ಧೈರ್ಯದಿಂದ ಇದ್ದೇವೆ. ಮಧ್ಯಂತರ ಚುನಾವಣೆ ಯಾವಾಗ ಬರುತ್ತೋ ಗೊತ್ತಿಲ್ಲ. ನಾವು ತಯಾರಿ ಮಾಡಬೇಕಾಗುತ್ತದೆ. ಅವರ ಸರ್ಕಾರ ಯಾವಾಗ ಬೀಳುತ್ತದೆ ಎಂದು ಕಾದು ಕೂರಲು ಆಗಲ್ಲ. ವಿರೋಧ ಪಕ್ಷದಲ್ಲಿದ್ದು, ಜವಾಬ್ದಾರಿಯುತ ಕೆಲಸ ಮಾಡಲು ಪ್ರಯತ್ನ ಮಾಡುತ್ತಿದ್ದೇವೆ ಎಂದರು.
ಸಿಎಂ ಬದಲಾವಣೆ ಅವರ ಪಕ್ಷದ ಆಂತರಿಕ ವಿಚಾರವಾಗಿದೆ. ಅದರ ಬಗ್ಗೆ ನಾವು ಹೆಚ್ಚಿನ ನಿರೀಕ್ಷೆ ಇಟ್ಟಿಲ್ಲ. ಭೂ ಸುಧಾರಣೆ ಕಾಯ್ದೆ, ಎಪಿಎಂಸಿ, ಕೋವಿಡ್ ಹಗರಣ, ಪ್ರವಾಹ ಸೇರಿ ಇತರ ವಿಷಯಗಳ ಬಗ್ಗೆ ಅಧಿವೇಶನದಲ್ಲಿ ಪ್ರಸ್ತಾಪ ಮಾಡುತ್ತೇವೆ. ಉಮೇಶ್ ಕತ್ತಿ ಅವರ ಅಸಮಾಧಾನ ಕೂಡ ಅವರ ಪಕ್ಷಕ್ಕೆ ಬಿಟ್ಟ ವಿಚಾರ ಎಂದು ಪರೋಕ್ಷವಾಗಿ ಸಿಎಂಗೆ ಕುಟುಕಿದರು.
ಪಕ್ಷದ ಸಂಘಟನೆ ನನಗೆ ಹೆಚ್ಚು ಖುಷಿ ಕೊಡುತ್ತದೆ. ಹೆಚ್ಚು ಸಂಘಟಿತರಾಗುತ್ತ, ಮತ್ತೆ ಅಧಿಕಾರಕ್ಕೆ ಬರಲು ಪ್ರಾಮುಖ್ಯತೆ ನೀಡುತ್ತಿದ್ದೇವೆ ಎಂದರು. ಬೆಳಗಾವಿಯಲ್ಲಿ ಅಧಿವೇಶನ ನಡೆಸಲು ಸರ್ಕಾರಕ್ಕೆ ಇಚ್ಛಾಶಕ್ತಿ ಕೊರತೆಯಿದೆ. ನೂರಾರು ಕೋಟಿ ವೆಚ್ಚದಲ್ಲಿ ನಿರ್ಮಿಸಿದ ಸುವರ್ಣಸೌಧ ಸದುಪಯೋಗ ಆಗಬೇಕು. ಜಿಲ್ಲಾ ಮಟ್ಟದ ಕಚೇರಿಗಳನ್ನು ಸುವರ್ಣಸೌಧಕ್ಕೆ ಸ್ಥಳಾಂತರ ಮಾಡಿದರೇ ತೊಂದರೆ ಆಗುತ್ತದೆ ಎಂದರು.
ಅಧಿವೇಶನ ನಡೆಸಲೆಂದು ಡಿಸೈನ್ ಮಾಡಿ, ಸುವರ್ಣಸೌಧ ಕಟ್ಟಲಾಗಿದೆ. ಸುವರ್ಣಸೌಧದಲ್ಲಿ ಕನಿಷ್ಠ ಪಕ್ಷ ಒಂದು ಬಾರಿಯಾದ್ರೂ ಸಂಪುಟ ಸಭೆ, ಅಧಿವೇಶನ ನಡೆಸಬೇಕು ಎಂದರು.