ಬೆಳಗಾವಿ: ಸಿಎಂ ಬದಲಾವಣೆ ಬಿಜೆಪಿ ಆಂತರಿಕ ವಿಚಾರ. ಹೀಗಾಗಿ ನಾನು ಈ ಬಗ್ಗೆ ಯಾವುದೇ ರೀತಿಯ ಪ್ರತಿಕ್ರಿಯೆ ನೀಡುವುದಿಲ್ಲ ಎಂದು ಶಾಸಕಿ ಲಕ್ಷ್ಮೀ ಹೆಬ್ಬಾಳ್ಕರ್ ಹೇಳಿದರು.
ಶಾಸಕಿ ಹೆಬ್ಬಾಳ್ಕರ್ ನಗರದ ಪ್ರವಾಸಿ ಮಂದಿರದಲ್ಲಿ ಸಿಎಂ ನೇತೃತ್ವದಲ್ಲಿ ನಡೆದ ನೆರೆ ಪ್ರವಾಹ ಸಂಬಂಧ ಹಮ್ಮಿಕೊಂಡಿದ್ದ ಸಭೆಯಲ್ಲಿ ಭಾಗಿಯಾಗಿದ್ದರು. ಬಳಿಕ ಮಾಧ್ಯಮಗಳೊಂದಿಗೆ ಮಾತನಾಡಿದರು.
2019ರಲ್ಲಿ ಆಗಿರುವ ಪ್ರವಾಹದ ಅವಾಂತರದ ಪರಿಹಾರ ಇನ್ನು ಸಿಕ್ಕಿಲ್ಲ. ಇದನ್ನು ಸಿಎಂ ಹಾಗೂ ಉಸ್ತುವಾರಿ ಸಚಿವರ ಗಮನಕ್ಕೆ ತರುವ ಕೆಲಸ ಮಾಡಿದ್ದೇನೆ. ಏಳು ಕಂದಾಯ ವಿಭಾಗದಲ್ಲಿ ಅಂದಾಜು 1,700 ಕೋಟಿ ರೂ. ಹಾನಿ ಆಗಿದೆ. ಹೀಗಾಗಿ ಬೆಳಗಾವಿ ಜಿಲ್ಲೆಯನ್ನು ಸುಧಾರಿಸಲು 200 ಕೋಟಿ ರೂ.ಗಳನ್ನು ತುರ್ತಾಗಿ ಕೊಡಬೇಕೆಂದು ಉಸ್ತುವಾರಿ ಸಚಿವ ಗೋವಿಂದ್ ಕಾರಜೋಳ ಮೂಲಕ ಮನವಿ ಮಾಡಲಾಗಿದೆ ಎಂದರು.
ನಮ್ಮ ಬೇಡಿಕೆಗೆ ಸಿಎಂ ಸ್ಪಂದನೆ ನೀಡಿದ್ದು, ಬೆಂಗಳೂರಿಗೆ ಹೋಗಿ ಹಣಕಾಸು ವ್ಯವಸ್ಥೆ ನೋಡಿಕೊಂಡು ಪರಿಹಾರ ನೀಡುವ ಬಗ್ಗೆ ಕ್ರಮ ಕೈಗೊಳ್ಳಲಾಗುವುದು ಎಂದಿದ್ದಾರೆ. ಸಿಎಂ ಪರಿಹಾರ ಬಿಡುಗಡೆ ಮಾಡುವ ವಿಶ್ವಾಸವಿದೆ ಎಂದರು.
ಇದನ್ನೂ ಓದಿ: ನಾನಿಲ್ಲಿ ಪ್ರವಾಹ ಪ್ರದೇಶದ ಭೇಟಿಗೆ ಬಂದಿದ್ದೇನೆ, ನಾಯಕತ್ವ ಚರ್ಚೆ ಬೇಡ: ಬಿಎಸ್‌ವೈ
ರಾಜ್ಯದಲ್ಲಿ ಸಿಎಂ ಬದಲಾವಣೆ ವಿಚಾರಕ್ಕೆ ಪ್ರತಿಕ್ರಿಯೆ ನೀಡಿದ ಅವರು, ಅದು ಬಿಜೆಪಿ ಪಕ್ಷದ ಆಂತರಿಕ ವಿಚಾರ. ಈ ಬಗ್ಗೆ ನಾನು ಯಾವುದೇ ಪ್ರತಿಕ್ರಿಯೆ ನೀಡುವುದಿಲ್ಲ ಎಂದು ತಿಳಿಸಿದರು.