ಬೆಳಗಾವಿ: ರಮೇಶ್ ಜಾರಕಿಹೊಳಿ ಮರಳಿ ಮಂತ್ರಿ ಆಗಬೇಕು ಅನ್ನೋದು ನಮ್ಮೆಲ್ಲರ ಆಸೆ ಎಂದು ಕೆಎಂಎಫ್ ಅಧ್ಯಕ್ಷ ಬಾಲಚಂದ್ರ ಜಾರಕಿಹೊಳಿ ಇಂಗಿತ ವ್ಯಕ್ತಪಡಿಸಿದರು.
ಗೋಕಾಕ ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡುತ್ತಾ, ರಮೇಶ್ ದೆಹಲಿಯಿಂದ ಬೆಂಗಳೂರಿಗೆ ವಾಪಸ್ ಆಗಿದ್ದಾರೆ. ನಾಳೆ ಗೋಕಾಕಿಗೆ ಬರಲಿದ್ದಾರೆ. ಆ ಬಳಿಕ ಮತ್ತೊಂದು ಸುತ್ತಿನ ಸಭೆ ಮಾಡುತ್ತೇನೆ. ಸಭೆಯ ಬಳಿಕ ಎರಡು ದಿನಗಳಲ್ಲಿ ಜಂಟಿ ಸುದ್ದಿಗೋಷ್ಠಿ ನಡೆಸಿ ಕೆಲವೊಂದಿಷ್ಟು ವಿಚಾರ ಬಹಿರಂಗಪಡಿಸುತ್ತೇವೆ.
ಅವರು ಮರಳಿ ಮಂತ್ರಿ ಆಗಬೇಕೆಂದು ನಮ್ಮೆಲ್ಲರ ಆಸೆ. ರಮೇಶ್ ಜಾರಕಿಹೊಳಿಯವರನ್ನೇ ಸಚಿವರನ್ನಾಗಿ ಮಾಡಲು ಪ್ರಯತ್ನ ಮಾಡುತ್ತೇವೆ. ಈ ಬಗ್ಗೆ ಕೆಲ ಕಾನೂನು ತೊಡಕುಗಳಿವೆ. ಈ ಎಲ್ಲದರ ಬಗ್ಗೆಯೂ ಸುದ್ದಿಗೋಷ್ಠಿಯಲ್ಲಿ ಮಾಹಿತಿ ನೀಡುತ್ತೇವೆ ಎಂದರು.
ನಾನು ಸಚಿವ ಸ್ಥಾನಕ್ಕೆ ಮನವಿ ಮಾಡಿಲ್ಲ. ನನ್ನ ಪಾಡಿಗೆ ಕ್ಷೇತ್ರದಲ್ಲಿ ಕೆಲಸ ಮಾಡುತ್ತಿದ್ದೇನೆ. ಕೆಎಂಎಫ್ ಅಧ್ಯಕ್ಷ ಸ್ಥಾನದ ಜವಾಬ್ದಾರಿಯೂ ನನ್ನ ಮೇಲಿದೆ. ಮಂತ್ರಿ ಸ್ಥಾನಕ್ಕೆ ಲಾಬಿ ಮಾಡುತ್ತಿರುವುದಾಗಿ ಮಾಧ್ಯಮಗಳಲ್ಲಿ ವರದಿ ಆಗುತ್ತಿದೆ. ಆದರೆ ಯಾರೂ ಸಹ ನನಗೆ ಸಚಿವ ಸ್ಥಾನದ ಆಫರ್ ಮಾಡಿಲ್ಲ. ನಾನು ಕೂಡ ಎಲ್ಲಿಯೂ ಮಿನಿಸ್ಟರ್‌ಗಿರಿಗೆ ಬೇಡಿಕೆಯಿಟ್ಟಿಲ್ಲ. ರಾಜಕಾರಣದಲ್ಲಿ ಅಸಮಾಧಾನ, ಬೇಜಾರು ಇದ್ದೇ ಇರುತ್ತದೆ, ಪಕ್ಷದಲ್ಲಿರುವ ಕೆಲವರು ಬೆನ್ನಿಗೆ ಚೂರಿ ಹಾಕಿದ ಬಗ್ಗೆ ಗೊತ್ತಿಲ್ಲ ಎಂದಿದ್ದಾರೆ.
ಇದನ್ನು ಓದಿ:ರಾಜ್ಯ ರಾಜಕೀಯದಲ್ಲಿ ತೀವ್ರ ಕುತೂಹಲ ಮೂಡಿಸಿದ ರಮೇಶ್ ಜಾರಕಿಹೊಳಿ..!