ಚಿಕ್ಕೋಡಿ: ಮಹಾರಾಷ್ಟ್ರ ಪಶ್ಚಿಮ ಘಟ್ಟದಲ್ಲಿ ನಿರಂತರ ಸುರಿಯುತ್ತಿರುವ ಮಳೆಯಿಂದ ಚಿಕ್ಕೋಡಿ ಶೈಕ್ಷಣಿಕ ಜಿಲ್ಲೆಯಲ್ಲಿ ಹರಿಯುತ್ತಿರುವ ನದಿಗಳಲ್ಲಿ ನೀರಿನ ಒಳಹರಿವು ಪ್ರಮಾಣ ಹೆಚ್ಚಾಗಿದ್ದು, ಬಂಗಾಲಿ ಬಾಬಾ ದರ್ಗಾ ಜಲದಿಗ್ಭಂಧನಕ್ಕೆ ಒಳಗಾಗಿದೆ.
ಬೆಳಗಾವಿ ಜಿಲ್ಲೆಯ ನಿಪ್ಪಾಣಿ ತಾಲೂಕು ಕಾರದಗಾ ಗ್ರಾಮದ ಆರಾಧ್ಯ ದೈವ ಬಂಗಾಲಿ ಬಾಬಾ ದರ್ಗಾ ಜಲದಿಗ್ಭಂಧನಕ್ಕೆ ಒಳಗಾಗಿದ್ದು, ಸದ್ಯ ಬಾಬಾನ ದರ್ಶನಕ್ಕೆ ದೂದಗಂಗಾ ನದಿ ನೀರು ತಡೆಯನ್ನು ಒಡ್ಡಿದೆ. ದೂಧಗಂಗಾ ನದಿಯ ಒಳಹರಿವು ಹೆಚ್ಚಳಗೊಂಡ ಹಿನ್ನೆಲೆ ದರ್ಗಾದ ಮುಂದೆ ಎರಡು ಅಡಿಯಷ್ಟು ನೀರು ಸುತ್ತುವರಿದೆ. ಉತ್ತರ ಕರ್ನಾಟಕದ ದೊಡ್ಡ ನದಿ ಕೃಷ್ಣಾ ನದಿಯಲ್ಲಿಯೂ ನೀರಿನ ಒಳ ಹರಿವು ಹೆಚ್ಚಳವಾಗಿದೆ. ಸದ್ಯ ಮಹಾರಾಷ್ಟ್ರ ರಾಜಾಪುರ ಬ್ಯಾರೇಜ್ ನಿಂದ 91 ಸಾವಿರ ಕ್ಯೂಸೆಕ್ ನೀರು ಹರಿದು ಬರುತ್ತಿದೆ.
ಮಹಾರಾಷ್ಟ್ರ ಪಶ್ಚಿಮ ಘಟ್ಟದಲ್ಲಿ ಮಳೆ ಪ್ರಮಾಣ: ಕೊಯ್ನಾ ಜಲಾಶಯ ಭಾಗದಲ್ಲಿ 133 ಮಿಲಿಮೀಟರ್ . ನವಾಜ ಭಾಗದಲ್ಲಿ 140 ಮಿಲಿ ಮೀಟರ್. ಮಹಾ ಬಬಲೇಶ್ವರ 127 ಮಿಲಿ ಮೀಟರ್, ವಾರಣ 60 ಮಿಲಿ ಮೀಟರ್, ಸಾಂಗ್ಲಿ 9 ಮಿಲಿಮೀಟರ್, ಕೊಲ್ಲಾಪುರ 29ಮಿಲಿ ಮೀಟರ್, ಕಾಳಮ್ಮವಾಡಿ 40 ಮಿಲಿ ಮೀಟರ್, ರಾಧಾ ನಗರಿ 90 ಮಿಲಿ ಮೀಟರ್, ಪಾಟಗಾಂವ್ 110 ಮಿಲಿ ಮೀಟರ್ ಕಳೆದ 24 ಗಂಟೆಗಳಲ್ಲಿ ಇಷ್ಟು ಪ್ರಮಾಣದ ಮಳೆ ಸುರಿದಿದೆ ಎಂದು ಮಹಾರಾಷ್ಟ್ರ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.
ಏಳು ಸೇತುವೆಗಳು ಜಲಾವೃತ: ಚಿಕ್ಕೋಡಿ ತಾಲೂಕಿನ ಮಲಿಕವಾಡ -ದತ್ತವಾಡ ಸಂಪರ್ಕ ಕಲ್ಪಿಸುವ ಸೇತುವೆ ಮುಳುಗಡೆಯಾಗಿದೆ. ನಿಪ್ಪಾಣಿ ತಾಲೂಕಿನ ಕಾರದಗಾ - ಭೋಜ, ಭೋಜವಾಡಿ-ಕುನ್ನೂರ, ಸಿದ್ದಾಳ-ಅಕ್ಕೋಳ, ಜತಾಟ-ಭಿವಶಿ, ಮಮದಾಪೂರ-ಹುನ್ನರಗಿ, ಕುನೂರ-ಬಾರವಾಡ ಸೇತುವೆಗಳು ನದಿಯಲ್ಲಿ ಒಳಹರಿವು ಹೆಚ್ಚಳವಾಗಿರುವ ಹಿನ್ನೆಲೆ ಜಲಾವೃತವಾಗಿವೆ. ಮುಂಜಾಗ್ರತಾ ಕ್ರಮವಾಗಿ ಚಿಕ್ಕೋಡಿ ಹಾಗೂ ನಿಪ್ಪಾಣಿ ಪೊಲೀಸರು ಸೇತುವೆಗೆ ಸಂಪರ್ಕ ಕಲ್ಪಿಸುವ ರಸ್ತೆಗಳಿಗೆ ಬ್ಯಾರಿಕೇಡ್ ಅಳವಡಿಸಿ ಸಂಚಾರ ಬಂದ್ ಮಾಡಿದ್ದಾರೆ.
ಎಸ್ಪಿ ಸಂಜೀವ್ ಪಾಟೀಲ್ ಭೇಟಿ ನೀರಿ ಪರಿಶೀಲನೆ: ಚಿಕ್ಕೋಡಿ ನಿಪ್ಪಾಣಿ ನದಿ ತೀರಗಳಿಗೆ ಎಸ್ಪಿ ಸಂಜೀವ್ ಪಾಟೀಲ್ ಭೇಟಿ ನೀಡಿ ಪರಿಶೀಲನೆ ನಡೆಸಿದರು. ಒಂದು ವೇಳೆ, ಪ್ರವಾಹ ಬಂದ್ರೆ ಎದುರಿಸಲು ಯಾವ ಯಾವ ಸುರಕ್ಷಿತ ಕ್ರಮಗಳನ್ನು ಕೈಗೊಳ್ಳಬೇಕು ಎಂಬ ನಿಟ್ಟಿನಲ್ಲಿ ಸ್ಥಳೀಯ ಅಧಿಕಾರಿಗಳ ಜೊತೆ ಸಮಾಲೋಚನೆ ನಡೆಸಿದರು.
ಸುರಕ್ಷತೆಗೆ ಹೆಚ್ಚಿನ ಆದ್ಯತೆ: ನಂತರ ಮಾಧ್ಯಮಗಳ ಜೊತೆ ಮಾತನಾಡಿದ ಅವರು, ಬೆಳಗಾವಿ ಜಿಲ್ಲೆಯಲ್ಲಿ ಒಂಬತ್ತು ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ 16 ಸೇತುವೆಗಳು ಈಗಾಗಲೇ ಜಲಾವೃತವಾಗಿವೆ, ಸುರಕ್ಷಾ ಕ್ರಮವಾಗಿ ರಸ್ತೆಗಳಿಗೆ ಬ್ಯಾರಿಕೇಡ್ ಹಾಕಿ ಸಂಚಾರ ಬಂದ್ ಮಾಡಿದ್ದೇವೆ. ಯಾರು ಕೂಡ ಜಲಾವೃತಗೊಂಡಿರುವ ಸೇತುವೆಗಳ ಮೇಲೆ ಸಂಚಾರ ಮಾಡಬಾರದೆಂದು ಜನರಲ್ಲಿ ಮನವಿ ಮಾಡಿದರು.
ಜಿಲ್ಲಾದ್ಯಂತ ಈಗಾಗಲೇ 83 ಕೆಳಹಂತದ ಮತ್ತು ಮೇಲ್ಸೇತುವೆ ಮೇಲೆ ನಿಗಾ ಇಟ್ಟಿದ್ದೇವೆ, ನಾಳೆ ಭಾನುವಾರ ಇರೋದರಿಂದ ಜನರು ಪ್ರವಾಸ ಸ್ಥಳಕ್ಕೆ ಹೆಚ್ಚಾಗಿ ತೆರಳುತ್ತಾರೆ. ಸದ್ಯ ಮಳೆಗಾಲ ಇದೆ ಹಾಗೂ ನದಿಗಳು ತುಂಬಿ ಹರಿಯುತ್ತವೆ. ಇದರಿಂದ ಜನರು ತಮ್ಮ ಸುರಕ್ಷತೆಗೆ ಹೆಚ್ಚಿನ ಆದ್ಯತೆ ನೀಡಬೇಕೆಂದು ಎಸ್ ಪಿ ಎಚ್ಚರಿಕೆ ನೀಡಿದ್ದಾರೆ.
ಇದನ್ನೂಓದಿ: ಮರದ ದಿಮ್ಮಿಗಳಿಂದ ಅಸೋಗಾ ಸೇತುವೆ ಬ್ಲಾಕ್.. ರೈತರ ಜಮೀನುಗಳಿಗೆ ನುಗ್ಗಿದ ನೀರು